Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿ: ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆ

ಶಾಸಕ, ಸಂಸದರಿಗಿಲ್ಲದ ಅಧಿಕಾರ ಗ್ರಾ.ಪಂ ಸದಸ್ಯನಿಗಿದೆ: ಸಂಸದೆ ಶೋಭಾ ಕರಂದ್ಲಾಜೆ 

ಕುಂದಾಪುರ: ಪ್ರಜಾಪ್ರಭುತ್ವದ ಆಶಯಗಳ ಅಡಿಯಲ್ಲಿ ನಡೆಯುವ ಜನಪ್ರತಿನಿಧಿಗಳ ಆಯ್ಕೆಯ ಪ್ರಥಮ ಅಡಿಪಾಯವಾಗಿರುವ ಗ್ರಾಮ ಪಂಚಾಯಿತಿಗಳು ಸುಭದ್ರವಾಗಿದ್ದಲ್ಲಿ ದೇಶದ ಒಟ್ಟಾರೆ ವ್ಯವಸ್ಥೆಗಳು ಸುಭದ್ರವಾಗಿರುತ್ತದೆ ಎನ್ನುವ ಸಿದ್ದಾಂತವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು ರೂಢಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನುಡಿದರು.

     ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಎಂ.ಪಿ ಹಾಗೂ ಎಂ.ಎಲ್.ಎ ಗಳಿಗೆ ಇಲ್ಲದ ಕೆಲವೊಂದು ಅಧಿಕಾರಗಳು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಇದೆ. ಸರ್ಕಾರದ ನೀಡುವ ಮನೆ ಹಾಗೂ ಶೌಚಾಲಯಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುವುದು ಗ್ರಾಮ ಪಂಚಾಯಿತಿಗಳಿಗೆ ಮಾತ್ರ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳು ನೇರವಾಗಿ ಗ್ರಾಮ ಪಂಚಾಯಿತಿಗಳನ್ನು ತಲುಪುವ ವ್ಯವಸ್ಥೆಗಳಿವೆ. ಪಂಚಾಯಿತಿ ಸದಸ್ಯರುಗಳು ಸಂವಿಂಧಾನದ ಆಶಯಗಳನ್ನು ಅನುಷ್ಠಾನಗೊಳಿಸಲು ಕಾನೂನಿನ ಕಾವಲು ನಾಯಿಗಳಂತೆ ಕೆಲಸ ನಿರ್ವಹಿಸಬೇಕು. ಹಿಂದೆ ಗ್ರಾಮೀಣಾಭಿವೃದ್ದಿ ಸಚಿವೆಯಾಗಿದ್ದಾಗ, ಗ್ರಾಮ ಪಂಚಾಯಿತಿಗಳಲ್ಲಿ ಶೇ.50 ರಷ್ಟು ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ನನ್ನ ಉದ್ದೇಶಗಳನ್ನು ಸರ್ಕಾರ ಈಡೇರಿಸಿರುವುದು ಸಂತೋಷ ತಂದಿದೆ. ಇದರಿಂದಾಗಿ ರಾಜ್ಯದಲ್ಲಿ ಅಂದಾಜು 2,500 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಅಧ್ಯಕ್ಷರಾಗುವ ಅವಕಾಶಗಳಿವೆ ಎಂದು ಹೇಳಿದ ಅವರು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಉಡುಪಿ ನ.1 ಸ್ಥಾನವನ್ನು ಪಡೆದುಕೊಂಡಿದೆ ಎಂದು ನುಡಿದರು.

    ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯಿತಿ ಸದಸ್ಯರುಗಳು ಕೀಳಿರಿಮೆಯನ್ನು ಬೆಳೆಸಿಕೊಳ್ಳ ಬಾರದು. ಶಾಸಕರು ಹಾಗೂ ಸಂಸದರಂತೆ ತಾವು ಕೂಡ ಜನರಿಂದ ನೇರವಾಗಿ ಆಯ್ಕೆಯಾದವರು ಎನ್ನುವ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನೂತನವಾಗಿ ಆಯ್ಕೆಯಾದ ಪಂಚಾಯಿತಿ ಸದಸ್ಯರಿಗೆ ಸೂಕ್ತ ತರಬೇತಿ ನೀಡಿದಾಗ ಅವರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಚುನಾವಣಾ ಮುಗಿದ ಬಳಿಕ ದ್ವೇಷದ ರಾಜಕಾರಣ ಮಾಡದೆ, ಅಭಿವೃದ್ದಿ ಪರವಾಗಿರುವ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.

   ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ್ ಗಂಟಿಹೊಳೆ, ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಇಂದಿರಾ ಶೆಟ್ಟಿ, ಗೀತಾಂಜಲಿ ಸುವರ್ಣ, ಬಾಬು ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಶ್ಯಾನುಭಾಗ್, ರೈತ ಮೋರ್ಚಾ ಅಧ್ಯಕ್ಷ ಗೋಪಿನಾಥ, ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ನೆಂಪು, ಎಸ್‌ಸಿ/ಎಸ್‌ಟಿ ಮೋರ್ಚಾ ಅಧ್ಯಕ್ಷ ಪ್ರಭಾಕರ ಮೊವಾಡಿ, ಅಲ್ಪ ಸಂಖ್ಯಾಕ ಮೋರ್ಚಾ ಅಧ್ಯಕ್ಷ ರೆಮ್ಸ್‌ನ್ ಪಿರೇರಾ ವೇದಿಕೆಯಲ್ಲಿ ಇದ್ದರು.

   ಬಿಜೆಪಿ ಬೈಂದೂರು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ನಿರೂಪಿಸಿದರು.

Exit mobile version