ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ.03ರಿಂದ ಮೊದಲ್ಗೊಂಡು ಮೇ.11ರ ತನಕ ಜರುಗಲಿದ್ದು, ಆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಮೇ.೯ರಂದು ಮನ್ಮಹಾರಥೋತ್ಸವ ಜರುಗಲಿದ್ದು, ರಥೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಅಪ್ಪಿಕಟ್ಟೆ ಉತ್ಸವ, ಬಿಯಾರಕಟ್ಟೆ ಉತ್ಸವ, ಜಟ್ಕನಕಟ್ಟೆ ಉತ್ಸವ, ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ, ಅವಭೃತೋತ್ಸವ, ನಗರೋತ್ಸವ ನಡೆಯಲಿದೆ. ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.