Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು: ಕುಡಿದ ಮತ್ತಿನಲ್ಲಿ ಅಣ್ಣನನ್ನೇ ಕೊಲೆಗೈದ ತಮ್ಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ತನ್ನ ಅಣ್ಣನನ್ನೇ ಒಡಹುಟ್ಟಿದ ತಮ್ಮ ಕೊಲೆ ಮಾಡಿದ ಘಟನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಬವಳಾಡಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿ ನಾಗರಾಜ (47) ಕೊಲೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಆತನ ಸಹೋದರ ಸಂತೋಷ (20) ಕೊಲೆಗೈದ ಆರೋಪಿ. ಘಟನೆಯನ್ನು ಸಹಜ ಸಾವು ಎಂದು ಬಿಂಬಿಸಲು ಹೊರಟಿದ್ದು, ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೊಲೆಯ ಬಗ್ಗೆ ತಿಳಿದುಬಂದಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಆರೋಪಿ ಸಂತೋಷ್

ಆಗಿದ್ದೇನು?: ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿಯಾದ ಕುಪ್ಪ ಕೊರಗ ಎಂಬುವವರಿಗೆ ೧೨ ಮಕ್ಕಳ ಪೈಕಿ ನಾಗರಾಜ ಹಾಗೂ ಸಂತೋಷ ಇಬ್ಬರು ಕೂಲಿ ಕೆಲಸ ಮಾಡಿ ಒಟ್ಟಿಗೆ ಬದುಕುತ್ತಿದ್ದರು. ಇಬ್ಬರು ಗುರುವಾರ ಆಲೂರಿನಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವಾಗ ಕುಡಿದು ಬಂದಿದ್ದರು. ರಾತ್ರಿ 9:30ರ ಸುಮಾರಿಗೆ ತಮ್ಮ ಸಂತೋಷ ಕೇವಲ ಒಳ ಉಡುಪಿನಲ್ಲಿ ಮನೆಯ ಸನಿಹದಲ್ಲಿ ತಿರುಗುತ್ತಿದ್ದು, ಇದನ್ನು ಆಕ್ಷೇಪಿಸಿದ ಅಣ್ಣ ನಾಗರಾಜನು, ಹೆಂಗಸರು ಮಕ್ಕಳು ತಿರುಗಾಡುವ ಜಾಗದಲ್ಲಿ ಕೇವಲ ಒಳ ಉಡುಪಿನಲ್ಲಿ ತಿರುಗುತ್ತಿದ್ದಿಯಲಾ, ನಿನಗೆ ನಾಚಿಕೆ ಆಗುವುದಿಲ್ವಾ? ಎಂದು ಬೈದನು, ಇದಕ್ಕೆ ಕೋಪಗೊಂಡ ಸಂತೋಷನು ಮೂಲೆಯಲ್ಲಿದ್ದ ತನ್ನ ತಂದೆಯ ಉರುಗೋಲನ್ನು ತೆಗೆದುಕೊಂಡು ಅಣ್ಣನ ಮೇಲೆ ಹಲ್ಲೆ ಮಾಡಿರುವುದಲ್ಲದೇ, ಆತನ ತಲೆಯ ಮೇಲೆ ಬಲವಾಗಿ ಹೊಡೆದನು, ಆಗ ನಾಗರಾಜ ಮೂರ್ಛೆ ಹೋಗಿದ್ದು, ಆಗ ಅಲ್ಲಿದ್ದ ಆತನ ಸಹೋದರಿಯರು ನೀರು ಕುಡಿಸಿ ಆರೈಕೆ ಮಾಡಿದ್ದರೂ ಕೂಡಾ ನಾಗರಾಜ ತೀವ್ರ ರಕ್ತಶ್ರಾವದಿಂದ ತಡರಾತ್ರಿ 2 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದನು. ಸಹೋದರ ಜಗಳವನ್ನು ತಪ್ಪಿಸಲು ಬಂದ ಭಾವ ಬಾಬುವಿನ ಮೇಲೂ ಆರೋಪಿ ಸಂತೋಷ ಹಲ್ಲೆ ಮಾಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೈಂದೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿದೆ.

ಶುಕ್ರವಾರ ಬೆಳಗ್ಗೆ ಈ ಕೊಲೆಯನ್ನು ಯಾರಿಗೂ ತಿಳಿಯದಂತೆ, ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಿ ಶುಕ್ರವಾರ ಬೆಳಗ್ಗೆ ಶವ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗಿತ್ತು, ಆದರೆ ಈ ಸಂದರ್ಭ ಆರೋಪಿ ಸಂತೋಷ ಪರಾರಿಯಾಗಿರುವುದು ಹಾಗೂ ಅಲ್ಲಲ್ಲಿ ರಕ್ತ ಚೆಲ್ಲಿರುವುದು ಸ್ಥಳೀಯರಿಗೆ ಅನುಮಾನಕ್ಕೀಡು ಮಾಡಿತ್ತು, ಆಗ ಅವರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದರು, ಸ್ಥಳಕ್ಕಾಗಮಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಇದೊಂದು ಕೊಲೆ ಪ್ರಕರಣ ಎನ್ನುವುದು ಬೆಳಕಿಗೆ ಬಂದಿತ್ತು. ಆರೋಪಿ ಸಂತೋಷ ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾದ ನಾಗರಾಜನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಕುಡಿತದ ಚಟ ಹೊಂದಿರುವ ಆರೋಪಿ ಸಂತೋಷನ ವಿರುದ್ಧ ಯುವತಿಯರಿಗೆ ಚುಡಾಯಿಸಿರುವುದರ ಬಗ್ಗೆ ಹಲವು ಬಾರಿ ಬೈಂದೂರು ಠಾಣೆಯಲ್ಲಿ ದೂರು ನೀಡಲಾಗಿದೆ.

ಎಸ್‌ಪಿ ನಿಶಾ ಜೇಮ್ಸ್ ಘಟನಾಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗಾಗಿ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಹಾಗೂ ಠಾಣಾಧಿಕಾರಿ ಬಿ. ಎನ್. ತಿಮ್ಮೇಶ್ ನೇತೃತ್ವದಲ್ಲಿ ಶೋಧಕಾರ್ಯ ನಡೆಯುತ್ತಿದೆ.

 

Exit mobile version