Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಮಟ್ಟದ ಹಲಸಿನ ಹಬ್ಬ ಉದ್ಘಾಟನೆ

ಕುಂದಾಪುರ: ಗ್ರಾಮೀಣ ಭಾಗದ ಖಾದ್ಯಗಳು ಇಂದಿಗೂ ತನ್ನ ರುಚಿಯನ್ನು ಉಳಿಸಿಕೊಂಡಿರುವುದರಿಂದಾಗಿ ಹಲಸಿನ ಖಾದ್ಯ ಹಾಗೂ ಹಲಸಿನಿಂದ ಉತ್ಪಾದಿಸುವ ತಿಂಡಿ-ತಿನಿಸುಗಳು ಇಂದು ದೇಶವಲ್ಲದೆ ವಿದೇಶಗಳಲ್ಲಿಯೂ ಜನಪ್ರೀಯವಾಗಿದೆ ಎಂದು ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ ಉಡುಪ ಹೇಳಿದರು.

ಇಲ್ಲಿನ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ,  ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಹಾಗೂ ಭಾರತೀಯ ಕಿಸಾನ್ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ’ರಾಜ್ಯ ಮಟ್ಟದ ಹಲಸಿನ ಹಬ್ಬ 2015’ ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆ ಸಸಿಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಹಣ್ಣು ಹಂಪಲುಗಳನ್ನು ಬೆಳೆಯುವ ಸಸಿಗಳನ್ನು ವಿತರಣೆ ಮಾಡಬೇಕು. ಹಲಸು, ಹೆಬ್ಬಲಸು ಹಾಗೂ ಮಾವಿನ ಸಸಿಗಳು ಹಣ್ಣುಗಳನ್ನು ಮಾತ್ರವಲ್ಲದೆ, ಬೆಳೆ ಬಾಳುವ ಮರಗಳನ್ನು ನೀಡುತ್ತದೆ. ಬಡವರ ಹಾಗೂ ಸಾಮಾನ್ಯ ಜನರ ಖಾದ್ಯಗಳಾಗಿರುವ ಹಲಸಿನ ಉತ್ಪನ್ನಗಳು ಇಂದು ಕೇವಲ ಗ್ರಾಮೀಣ ಖಾದ್ಯಗಳಾಗಿ ಉಳಿದಿಲ್ಲ, ನಗರದಲ್ಲಿಯೂ ಇದರ ಬೇಡಿಕೆ ಹೆಚ್ಚಾಗಿರುವುದರಿಂದಾಗಿ ಮಾರುಕಟ್ಟೆಯಲ್ಲಿ ದರವೂ ಏರಿಕೆಯಾಗುತ್ತಿದೆ. ಸರ್ಕಾರ ಗ್ರಾಮೀಣ ಉತ್ಪನ್ನಗಳಿಗೆ ಸೂಕ್ತ ಪ್ರೋತ್ಸಾಹ ನೀಡುವುದರಿಂದ ಹಲಸಿನ ಉತ್ಪನ್ನಗಳ ಜತೆಯಲ್ಲಿ ಇತರ ಗ್ರಾಮೀಣ ಖಾದ್ಯಗಳು ಮಾರುಕಟ್ಟೆಯನ್ನು ಪ್ರವೇಶಿಸಿ ಗ್ರಾಮೀಣ ಜನರ ಬದುಕಿನಲ್ಲಿ ಹಸನು ತರಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಟಿ.ಹೆಚ್. ಗೌಡ ಹಲಸಿನ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ನಾರಾಯಣ ಸ್ವಾಮಿ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ.ಶ್ರೀಯಾನ್, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ, ಕುಂದಾಪುರದ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಇದ್ದರು

ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಲಸು ಬೆಳೆಗಾರರಿಂದ ಹಲಸಿನ ವಿವಿಧ ತಳಿಗಳ ಪ್ರದರ್ಶನ ಹಾಗೂ ಮಾರಾಟ ನಡೆಸಿದರು. ಗ್ರಾಮೀಣ ಹಲಸಿನ ಖಾದ್ಯ ತಯಾರಿಕೆಯ ಪ್ರಾತ್ಯಕ್ಷೀಕೆ, ಹಲಸಿನ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ವಿವಿಧ ವಿಚಾರಗೋಷ್ಠಿ, ಹಲಸಿನ ವಿಡಿಯೋ ಚಿತ್ರ ಪ್ರದರ್ಶನ ಹಾಗೂ ಹಲಸು ಕೃಷಿಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಗಣ್ಯರ ಭೇಟಿ : ಕುಂದಾಪುರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಹಲಸಿನ ಹಬ್ಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರು ಭೇಟಿ ನೀಡಿದ್ದರು.

ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ನಾರಾಯಣ ಹೆಗಡೆ ಸ್ವಾಗತಿಸಿದರು, ಬ್ರಹ್ಮಾವರ ಕೃಷಿ ಕೇಂದ್ರದ ಸಂಜೀವ ದ್ಯಾವತನಯ ಹಾಗೂ ಸುಶೀಲಾ ನಿರೂಪಿಸಿದರು

Exit mobile version