Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಕಡಲಿಗೆ ಇಳಿದ ಲಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮರವಂತೆಯ ಮೀನುಗಾರಿಕಾ ಹೊರಬಂದರು ಕಾಮಗಾರಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಲಾರಿಯೊಂದು ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಡಲಿಗೆ ಇಳಿದಿದೆ. ಲಾರಿಯ ಮುಂಭಾಗ ನೀರಿನಲ್ಲಿ ಮುಳುಗುವ ಮುನ್ನ ಚಾಲಕ ವಾಹನದಿಂದ ಹೊರಕ್ಕೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸುಮಾರು ಎಂಟು ವರ್ಷಗಳ ಹಿಂದೆ ಆರಂಭವಾದ ಬಂದರಿನ ಕಾಮಗಾರಿ ದೀರ್ಘ ಸಮಯದಿಂದ ಸ್ಥಗಿತವಾಗಿದೆ. ಮಾಡಿದ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂದು ಇಲ್ಲಿನ ಮೀನುಗಾರರು ದೂರುತ್ತಿದ್ದಾರೆ. ಕಾಮಗಾರಿಯ ವಿನ್ಯಾಸದಲ್ಲಿ ಬದಲಾವಣೆ ಮಾಡಿದ ಕಾರಣ ಅದಕ್ಕೆ ತಗಲುವ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ಗುತ್ತಿಗೆ ವಹಿಸಿಕೊಂಡ ತಮಿಳುನಾಡಿನ ಎನ್‌ಎಸ್‌ಕೆ ಬಿಲ್ಡರ‍್ಸ್ ಎಂಬ ಸಂಸ್ಥೆ ಒಂದು ವರ್ಷದ ಹಿಂದೆಯೇ ಕೆಲಸ ನಿಲ್ಲಿಸಿತ್ತು. ಅದರ ಪರಿಣಾಮವಾಗಿ ಸಂಸ್ಥೆಯ ಯಂತ್ರೋಪಕರಣಗಳು, ವಾಹನಗಳು ತುಕ್ಕು ಹಿಡಿದು ಬಳಸಲಾರದ ಸ್ಥಿತಿಗೆ ತಲಪಿವೆ. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಈ ಹಿಂದೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಹಾಗೂ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಅಂದಾಜು ತಯಾರಿಸಿ ಸರ್ಕಾರದ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಚುನಾವಣಾ ನೀತಿ ಸಂಹಿತೆಯ ಅವಧಿ ಮುಗಿಯುತ್ತದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಡುವ ಸೂಚನೆಯ ಹಿನ್ನೆಲೆಯಲ್ಲಿ ಇದ್ದಬದ್ದ ಯಂತ್ರ ಮತ್ತು ವಾಹನ ಬಳಸಿ ಕಾಮಗಾರಿ ಮರಳಿ ಆರಂಭಿಸಲು ಗುತ್ತಿಗೆದಾರರು ಮುಂದಾದರು. ಸುಸ್ಥಿತಿಯಲ್ಲಿಲ್ಲದ ಲಾರಿಯನ್ನು ಬಳಸಿದ್ದರಿಂದ ಅದು ನಿಯಂತ್ರಣಕ್ಕೆ ಬಾರದೆ ಕಡಲಿಗೆ ಇಳಿಯಿತು ಎಂದು ಹೇಳಲಾಗುತ್ತಿದೆ. ಅದನ್ನು ಎತ್ತಲು ಅಗತ್ಯವಿರುವ ಯಂತ್ರಸಂಸ್ಥೆಯ ಬಳಿ ಇಲ್ಲದ್ದರಿಂದ ಬೇರೆಯವರಿಂದ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಕೆಲಸಗಾರರು ಹೇಳುತ್ತಿದ್ದಾರೆ.

Exit mobile version