Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರಿ ಸಂಸ್ಥೆಗಳ ಮೂಲಕ ಜನಸೇವೆ: ಡಾ. ಎಂ. ಎನ್. ರಾಜೇಂದ್ರಕುಮಾರ್

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಕಂಬದಕೋಣೆ ಶಾಖೆ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಹಕಾರ ಸಂಸ್ಥೆಗಳನ್ನು ಹುಟ್ಟುಹಾಕಿ ಮುನ್ನಡೆಸುವುದು ಅಧಿಕಾರದ ಆಸೆಯಿಂದ ಅಲ್ಲ. ಅವುಗಳ ಮೂಲಕ ಜನರ ಸೇವೆ ಮಾಡಲು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ ಹೇಳಿದರು.

ಖಂಬದಕೋಣೆ ಉಡುಪ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸಲಿರುವ ಬೈಂದೂರಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್‌ನ ಐದನೆ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸೌಹಾರ್ದ ಪದ ಸರ್ವರನ್ನು ಒಳಗೊಂಡು ಮುಂದಡಿ ಇಡಬೇಕು ಎಂಬ ಅರ್ಥ ನೀಡುತ್ತದೆ. ಹತ್ತು ವರ್ಷಗಳ ಹಿಂದೆ ಸಹಕಾರಿ ರಂಗದ ಅನುಭವಿ ಎಸ್. ರಾಜು ಪೂಜಾರಿ ಅವರಿಂದ ಆರಂಭವಾದ ಶ್ರೀರಾಮ ಸೌಹಾರ್ದ ಕೋಪರೇಟಿವ್ ಆ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಆರಂಭದ ವರ್ಷದಿಂದಲೇ ಲಾಭ ಗಳಿಸಲಾರಂಭಿಸಿದ ಸಂಸ್ಥೆ ಈಗ ಐದು ಶಾಖೆಗಳೊಂದಿಗೆ ದಶಮಾನೋತ್ಸವ ಆಚರಿಸುವ ಹೊಸ್ತಿಲಲ್ಲಿ ನಿಂತಿದೆ. ಶೀಘ್ರ ರಾಜ್ಯದ ಸರ್ವಶ್ರೇಷ್ಠ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ಹಾರೈಸಿದರು.

ಭದ್ರತಾ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ, ಬೈಂದೂರು ಸಾಗರ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಕೆ. ಎಸ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಎಸ್. ರಾಜಯ ಪೂಜಾರಿ ಸ್ವಾಗತಿಸಿ ಸಂಸ್ಥೆ ನಡೆದುಬಂದ ದಾರಿಯ ಮೇಲೆ ಬೆಳಕು ಚೆಲ್ಲಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಸೀತಾರಾಮ ಮಡಿವಾಳ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರು, ಸದಸ್ಯರು, ಶಾಖಾ ವ್ಯವಸ್ಥಾಪಕ ರಾಜೇಂದ್ರ ಎಚ್, ಸಿಬ್ಬಂದಿ, ಹಿರಿಯ ಸಹಕಾರಿಗಳು, ಜನಪ್ರತಿನಿಧಿಗಳು ಇದ್ದರು.

Exit mobile version