Kundapra.com ಕುಂದಾಪ್ರ ಡಾಟ್ ಕಾಂ

ಆಧುನಿಕ ಅಮಾಸೆಬೈಲುವಿನ ನಿರ್ಮಾತೃ ಎ.ಜಿ. ಕೊಡ್ಗಿ

ಕರಾವಳಿ ಜಿಲ್ಲೆಯ ರಾಜಕಾರಣದಲ್ಲಿ ಅಪರೂಪದ ರಾಜಕೀಯ ಚಾಣಾಕ್ಷನಾಗಿ ಸುದೀರ್ಘ 56 ವರ್ಷಗಳ ಕಾಲ ತೊಡಗಿಸಿಕೊಂಡು, ತಾನು ಗುರುತಿಸಿಕೊಂಡ ಪಕ್ಷದಲ್ಲಿ ನಿಷ್ಠೆ ಹಾಗೂ ಬದ್ಧತೆಯನ್ನು ತೋರಿಸಿ, ಪಕ್ಷಕ್ಕೆ ತನ್ನ ಅವಶ್ಯಕತೆಯಿಲ್ಲ ಎಂದೆನಿಸಿದಾಗ ರಾಜಕೀಯದಿಂದಲೇ ನಿವೃತ್ತಿ ಪಡೆದ ಅಪರೂಪದ ಮುತ್ಸದ್ದಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ. ಅವರು ರಾಜಕೀಯದಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಕೃಷಿ, ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದವರು. 87ರ ವಯಸ್ಸಿನಲ್ಲಿಯೂ ಯುವರನ್ನೂ ನಾಚಿಸುವಂತಹ ಉತ್ಸಹ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಮನ್ನುಗ್ಗುತ್ತಿರುವ ಅವರು ಇದೀಗ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ತನ್ನೂರಿನ ಸರ್ವತೋಮುಖ ಅಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ.

ಕುಂದಾಪುರ ತಾಲೂಕು ಅಮಾಸೆಬೈಲು ಕೃಷಿಕ ಕುಟುಂಬದಲ್ಲಿ ಸ್ವಾತಂತ್ರ್ಯಹೋರಾಟಗಾರ ಕೃಷ್ಣರಾಯ ಕೊಡ್ಗಿ ಅವರ ಮಗನಾಗಿ 1929ರ ಅಕ್ಟೋಬರ್ 1 ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಕಾನೂನು ಪದವಿ ಪಡೆದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಿಸಿದರು. ಬಳಿಕ ಕೃಷಿಯಲ್ಲಿಯೇ  ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡವರು.

ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಎಂಟು ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972-83ರ ತನಕ ಬೈಂದೂರು ಶಾಸಕ, 2006-08ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಎಪಿಎಂಪಿ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕ್ಯಾಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ  ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1982-1990ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ

ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಕೊಡ್ಗಿಯವರಿಗೆ ಸಲ್ಲುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿರುವಾಗ  ಜಿಲ್ಲಾ ಕಾಂಗ್ರೆಸ್ ಸದಸ್ಯ, ರಾಜ್ಯ ಕಾಂಗ್ರೆಸ್ ಸದಸ್ಯರಾಗಿ ದುಡಿದವರು. 1993ರಲ್ಲಿ ಬಿಜೆಪಿಗೆ ಬಂದ ಕೊಡ್ಗಿ ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷ,  ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2006 ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, 2009ರಲ್ಲಿ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜಕೀಯ ನಿವೃತ್ತಿ ಪಡೆದು ಅಮಾಸೆಬೈಲಿನ ಅಭಿವೃದ್ಧಿಗಾಗಿ ಪಣತೊಟ್ಟು ನಿಂತರು.

 

* ಕೊಡ್ಗಿಯವರ ಕನಸಿನ ಅಮಾಸೆಬೈಲಿನ ಬಗ್ಗೆ ಹೇಳುವಿರಾ?

ಆ ದಿನಗಳಲ್ಲಿ ನಮ್ಮ ಕುಟುಂಬದ ಬಳಿ ಸಾಕಷ್ಟು ಉಳುಮೆ ಭೂಮಿ ಇದ್ದಿತ್ತು. ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದಾಗ ನನ್ನ ಗೇಣಿದಾರ ಒಕ್ಕಲುಗಳಿಗೆ ಸ್ವಲ್ಪವೂ ಬೇಸರಿಸದೇ ಡಿಕ್ಲರೇಶನ್ ನೀಡುವಂತೆ ಸೂಚಿಸಿದ್ದೆ. ಗೇಣಿದಾರರ ಪರವಾಗಿ ಹೋರಾಟದಲ್ಲಿಯೂ ಭಾಗವಹಿಸಿದ್ದೆ ಅಂದಿನಿಂದಲೂ ಅಮಾಸೆಬೈಲನ್ನು ಸುಂದರ ಊರನ್ನಾಗಿಸಬೇಕೆಂಬ ಇರಾದೆ ಹೊಂದಿದ್ದೆ. ಇಂದು ಅಮಾಸೆಬೈಲು ನಕ್ಸಲ್ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ನಕ್ಸಲರು ಬ್ಯಾಲೆಟ್ ನಿಂದಾಗದ ಕೆಲಸವನ್ನು ಬುಲೆಟ್ ನಿಂದ ಮಾಡಲು ಹೊರಟಿದ್ದಾರೆ. ಆದರೆ ಹಿಂಸೆಯ ಮಾರ್ಗ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ.

ಊರಿನ ಅಭಿವೃದ್ಧಿಗೆ ಸಾಕಷ್ಟು ಉತ್ತಮ ಮಾರ್ಗಗಳಿವೆ. ಅದಕ್ಕಾಗಿಯೇ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಆರಂಭಿಸಿದೆ. ಕರ್ನಾಟಕ ಬ್ಯಾಂಕ್ ಅಮಾಸೆಬೈಲು ಗ್ರಾಮವನ್ನು ದತ್ತು ಸ್ವೀಕರಿಸುವಂತೆ ಮಾಡಿದೆ. ಇದನ್ನು ಮಾದರಿ ಗ್ರಾಮವನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೇ ಅಮಾಸೆಬೈಲು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಕುಟುಂಬಗಳಿಗೆ ಮನೆ, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು ಒದಗಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಬಡ ಕುಟುಂಬಗಳಿಗೆ ಆರೋಗ್ಯ ರಕ್ಷಣೆ, ಗ್ರಾಮದ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲ್ಪಿಸುವುದು, ಅನಕ್ಷರಸ್ಥ ಶಿಕ್ಷಣ, ವಿಮೆ ಸೌಲಭ್ಯ, ಉದ್ಯೋಗ ಹೀಗೆ ನೂರಾರು ಯೋಜನೆಗಳಿವೆ. ಕುಂದಾಪ್ರ ಡಾಟ್ ಕಾಂ

* ರಾಜಕೀಯ ರಂಗದಲ್ಲಿ ಅಂದು-ಇಂದು ಏನು ಬದಲಾವಣೆಯನ್ನು ಕಾಣುತ್ತಿದ್ದೀರಿ?

ನಾನು ಮೊದಲಿನಿಂದಲೂ ಕೃಷಿಯ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದೆ. ತಂದೆಯವರ ಕಾಲಾನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾದ ಸಂದರ್ಭ ಬಂದೊದಗಿತು. ಅಂದು ರಾಜಕೀಯವೆಂದರೆ ನಂಬಿಕೆಯ ಆಧಾರದಲ್ಲಿ ನಡೆಯುತ್ತಿತ್ತು. ಭ್ರಷ್ಟಚಾರವೆಂಬ ಪದ ಅಂದು ಅಷ್ಟಾಗಿ ಬಳಕೆಗೆ ಬಂದಿರಲಿಲ್ಲ. ಇಗಿನ ಹಾಗೆ ಸಾಕಷ್ಟು ಅನುದಾನಗಳು ಬರುತ್ತಿರಲಿಲ್ಲ. ಶಾಸಕರಿಗೆ ದೊರೆಯುತ್ತಿದ್ದ ಟಿಎ ಡಿಎ ಉಳಿಸಿ ಜನಸೇವೆಯಲ್ಲಿ ತೊಡಗುತ್ತಿದ್ದರೂ ಅಲ್ಲೊಂದು ನೆಮ್ಮದಿ ಇತ್ತು. ಇಂದಿನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಎಲ್ಲವೂ ಹಾಳಾಗಿ ಹೋಗಿದೆ. ಅಧಿಕಾರ ಪಡೆಯುವುದು ಸ್ವ ಹಿತಾಸಕ್ತಿಗಾಗಿ ಎಂಬಂತೆ ಇಂದಿನವರು ನಡೆದುಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕುಂದಾಪ್ರ ಡಾಟ್ ಕಾಂ

* ಕೃಷಿ ಕ್ಷೇತ್ರದ ಬಗೆಗೆ ತಮ್ಮ ಅಭಿಪ್ರಾಯಗಳೇನು?

ಕೃಷಿಕರಿಗೆ ಸಮರ್ಪಕವಾದ ಮಾಹಿತಿಯ ಕೊರತೆಯಿಂದ ಕೃಷಿ ವೈಫಲ್ಯವನ್ನು ಕಾಣುತ್ತಿದೆ. ಬೆಳೆಯ ಬಗ್ಗೆ ಸಮರ್ಪಕವಾದ ಮಾಹಿತಿಯಿಲ್ಲದೇ ಬೆಳೆಯಲು ಮುಂದಾಗುತ್ತಾರೆ. ಆದರೆ ನಿಗದಿತ ಇಳುವರಿಯನ್ನು ಪಡೆಯುವುದಿಲ್ಲ. ಅದರಿಂದಾಗುವು ನಷ್ಟವನ್ನು, ಬೆಳೆಗಾಗಿ ತೆಗೆದ ಸಾಲವನ್ನು ಭರಿಸಲಾಗದೇ ಒದ್ದಾಡುತ್ತಾರೆ. ಅದರ ಬದಲಿಗೆ ಮಿಶ್ರ ಬೆಳೆಗಳನ್ನು ಬೆಳೆದು ಲಾಭ ಪಡೆಯಬಹುದಾಗಿದೆ. ರೈತನಿಗೆ ಈ ಬಗ್ಗೆ ಸಮರ್ಪಕವಾದ ಮಾಹಿತಿ, ಸ್ಥಿರ ಮಾರುಕಟ್ಟೆ, ಉಪ ಉತ್ಪನ್ನಗಳ ಕುರಿತಾದ ಮಾಹಿತಿ ಮುಂತಾದವುಗಳನ್ನು ಸಕಾಲದಲ್ಲಿ ನೀಡಿದರೆ ಉತ್ತಮ ಬೆಳೆ ತೆಗೆಯಲು ಸಾಧ್ಯ.

* ರಾಜಕೀಯ ರಂಗದ ಬೀಷ್ಮ ಎನ್ನುತ್ತಾರೆ. ಇದಕ್ಕೇನೆನ್ನುತ್ತೀರಿ?

ತಾನು ರಾಜಕೀಯಕ್ಕೆ ಪ್ರವೇಶಿಸಲು ಪ್ರಮುಖ ಕಾರಣ ನನ್ನ ತಂದೆಯವರು. ಅದದೊಂದಿಗೆ ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿದವರು ಶ್ರೀನಿವಾಸ ಮಲ್ಯ, ವಿ. ಎಸ್. ಆಚಾರ್ಯ ಸೇರಿದಂತೆ ಹಲವರಿದ್ದಾರೆ. ಹಾಗೆಯೇ ನಾನು ಬೆಳೆದಾಗ ನನ್ನಂತೆಯೇ ರಾಜಕೀಯದಲ್ಲಿ ಆಸಕ್ತಿ ಉಳ್ಳವರನ್ನು ಬೆಳೆಸಿದ್ದೇನೆ. ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದು ಬಳಿಕ ಜನಸಂಘ ಸೇರಿದಾಗ ಹಲವರು ನನ್ನ ಶಿಷ್ಯರಿದ್ದರು. 1993ರಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸಿ ಸೋತಾಗ ಧೃತಿಗೇಡದೇ ಜಯಗಳಿಸಿದ ಜಯರಾಮ ಶೆಟ್ಟಿಯವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆ. ಅಂದು ಆಸ್ಕರ್ ಫೆರ್ನಾಂಡಿಸ್ ಅವರ ಎದುರಿಗೆ ಜಯರಾಮ ಶೆಟ್ಟಿಯವರನ್ನು ನಿಲ್ಲಿಸಿ ಗೆಲ್ಲಿಸಿದ್ದು, ವಿನಯಕುಮಾರ್ ಸೊರಕೆ ಎದುರಿಗೆ  ಮನೋರಮಾ ಮಧ್ವರಾಜ್ ಅವರನ್ನು ನಿಲ್ಲಿಸಿ ಗೆಲ್ಲಿಸಿದ್ದನ್ನು ಜನರು ಇಂದಿಗೂ ಸ್ಮರಿಸುತ್ತಾರೆ.

ಕುಂದಾಪ್ರ ಡಾಟ್ ಕಾಂ- editor@kundapra.com

Exit mobile version