Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಯಾಕೂಬ್ ಖಾದರ್ ಗುಲ್ವಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2018 ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕುಂದಾಪುರದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ಮತ್ತು ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ಯವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2017 ನೇ ಸಾಲಿನಲ್ಲಿ ಕನ್ನಡಕ್ಕೆ ತಮ್ಮ ಗುಲ್ವಾಡಿ ಟಾಕೀಸ್ ನಿರ್ಮಾಣದ ” ರಿಸರ್ವೇಶನ್ ” ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ( ರಜತ ಕಮಲ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ( ಬಿಫ್ಸ್ 2018) ನ್ನು ತಂದು ಕೊಟ್ಟಿರುವ ಗುಲ್ವಾಡಿ ಪ್ರಸ್ತುತ ಕನ್ನಡದ ಹಿರಿಯ ಲೇಖಕಿ ನಾಡೋಜ ಡಾ. ಸಾ. ರಾ. ಅಬುಬಕ್ಕರ್ ಅವರ ಕಥೆಯನ್ನಾಧರಿಸಿ ಮೊದಲ ಬಾರಿಗೆ ತನ್ನದೆ ಚಿತ್ರಕಥೆ ಮತ್ತು ನಿರ್ದೇಶನದ ಇನ್ನು ಹೆಸರಿಡದ ಬ್ಯಾರಿ ಮತ್ತು ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ. ಬ್ಯಾರಿ ಭಾಷೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಚಿತ್ರವನ್ನು ದೂರದ ಅಮೆರಿಕ, ಲಂಡನ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಸಿಂಗಾಪುರ, ದುಬೈ , ಬಹರೈನ್ ದೇಶಗಳಲ್ಲಿರುವ ಕನ್ನಡಿಗರಿಗೆ ಮತ್ತು ಬ್ಯಾರಿ ಭಾಷಿಗರಿಗೆ ವಿಶೇಷ ಪ್ರದರ್ಶನದ ಮೂಲಕ ಚಿತ್ರವನ್ನು ಬಿಡುಗಡೆ ಮಾಡಿ ತೋರಿಸುವ ಉತ್ಸಾಹ ಹೊಂದಿದ್ದಾರೆ. ಈಗಾಗಲೇ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ವಿದೇಶಗಳಲ್ಲಿ ನಡೆದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಲ್ಲದೆ ಮೂರು ಪ್ರವಾಸ ಕಥನಗಳನ್ನು ಬರೆದಿದ್ದಲ್ಲದೆ ಗುಲ್ವಾಡಿ ಎಂಬ ಪುಟ್ಟ ಊರಲ್ಲಿ ಸೌಹಾರ್ದತೆಗೋಸ್ಕರ ವರ್ಷಕ್ಕೆರಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುವ ಯಾಕೂಬ್ ಖಾದರ್ ಗುಲ್ವಾಡಿ ಈ ಮೊದಲು ಕೂಡ ರಾಜ್ಯ ಮತ್ತು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡಿದ್ದರು

ಈಗ ಮತ್ತೆ ಕನ್ನಡದ ಹಿರಿಯ ನಿರ್ದೇಶಕ ಜೊಸೈಮನ್ ಅಧ್ಯಕ್ಷತೆಯ ಸಮೀತಿಯಲ್ಲಿ ಮತ್ತೊಮ್ಮೆ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಉಳಿದ ಸದಸ್ಯರಾಗಿ ಹಿನ್ನೆಲೆ ಗಾಯಕಿ ಅರ್ಚನಾ ಉಡುಪ, ನಿರ್ದೇಶಕ ಲೆಸ್ಲಿ ಕರ್ವಾಲೋ, ರಂಗಭೂಮಿ ಕಲಾವಿದ ವಿ.ಲಕ್ಷ್ಮಿ ಪತಿ, ವಸ್ತ್ರಾಲಂಕಾರ ಕಲಾವಿದ ಚಿನ್ಮಯ್, ಛಾಯಾಗ್ರಾಹಕ ಬಿ.ಎಲ್.ಬಾಬು, ಸಂಕಲನಕಾರ ಎಸ್.ಶಿವಕುಮಾರ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು ಈ ಸಮೀತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

 

Exit mobile version