ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಪತ್ರಕರ್ತರಾದವರಿಗೆ ವರದಿಗಾರಿಕೆ ಎನ್ನುವಂತದ್ದು ಕೇವಲ ವಿಷಯವನ್ನು ಪ್ರಸ್ತುತಪಡಿಸುವಿಕೆಯ ಮಾಧ್ಯಮವಾಗದೇ, ಓದುಗಾರರ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವಂತಹ ಸಾಧನವಾಗಬೇಕು ಎಂದು ಮಂಗಳೂರಿನ ಗ್ಲೋಬಲ್ ಟಿ.ವಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ ಎನ್.ವಿ ಪಾವ್ಲೋಸ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ‘ಪತ್ರಿಕೋದ್ಯಮ ದಿನಾಚರಣೆ’ಯ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಸಂಗ್ರಹಣೆಗೆ ಸಂವಹನದ ಅವಶ್ಯಕತೆಯಿದ್ದರೂ, ಸಂವಹನಕ್ಕೆ ಯಾವುದೇ ಭಾಷೆಯ ಅಗತ್ಯವಿಲ್ಲ, ಬದಲಾಗಿ ಹಾವ-ಭಾವಗಳ ಮುಖಾಂತರವೂ ವಿಷಯಗಳನ್ನು ಪ್ರಸ್ತುತಪಡಿಸಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಜೀವನವನ್ನು ಸುಖಮಯವನ್ನಾಗಿಸಿಕೊಳ್ಳುವ ಆತುರದಲ್ಲಿದ್ದಾರೆ. ಅಡ್ಡದಾರಿಗಳಿಲ್ಲದೆ ಯಶಸ್ಸನ್ನು ಪಡೆಯಲು ಜೀವನದ ಪ್ರತಿ ಹಂತದಲ್ಲೂ ಹೋರಾಟ ನಡೆಸಬೇಕು. ಇಂದಿನ ಜಗತ್ತಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಗತ್ಯವಿದ್ದು, ಇಂತಹ ವಿಮೋಚನೆಯಿಂದ ಜೀವನದಲ್ಲಿ ಎನಾದರೂ ಸಾಧಿಸಬಹುದು. ಪ್ರಾಯೋಗಿಕ ಜ್ಞಾನದ ಜೊತೆಗೆ, ವಿಷಯಗಳನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಿದಾಗ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ನಮ್ಮದಾಗಿಸಕೊಳ್ಳಬಹುದು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಬೋಧಿಸುವ ಜೊತೆಗೆ ಪ್ರೇರೇಪಿಸುವ ಅಗತ್ಯವಿದೆ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಕೆಲಸ ಮಾಡಬೇಕಿದೆ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಔದ್ಯೋಗಿಕ ಕ್ಷೇತ್ರಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಲ್ಲಿ ತಮ್ಮ ಕ್ಷೇತ್ರದ ಕುರಿತಾದ ಮಾಹಿತಿಯ ಕೊರತೆಯಿದ್ದು, ಇದು ಇಂದಿನ ಶಿಕ್ಷಣ ವ್ಯವಸ್ಥೆಯ ಸ್ಥಿತಿಯನ್ನು ಕುಚೋದ್ಯ ಮಾಡುವಂತಿದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಕುರಿತು ಜ್ಞಾನವನ್ನು ಪಡೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಮಾತ್ರವಲ್ಲ, ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಸಂಪೂರ್ಣ ವ್ಯಕಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಯಾರಿಸಿದ ಪ್ರಾಯೋಗಿಕ ಪತ್ರಿಕೆಗಳಾದ ಆಳ್ವಾಸ್ ಮಾಧ್ಯಮ, ಆಳ್ವಾಸ್ ವಿಶನ್, ಆಳ್ವಾಸ್ ಮಿರರ್ ಹಾಗೂ ಸುದ್ದಿಮನೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುರಿಯನ್, ಆಡಳಿತ ಅಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ,ಎಸ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀನಿವಾಸ ಪೆಜತ್ತಾಯ ಕಾರ‍್ಯಕ್ರಮವನ್ನು ಸ್ವಾಗತಿಸಿ, ಪದವಿ ವಿಭಾಗದ ಮುಖ್ಯಸ್ಥೆಯಾದ ರೇಷ್ಮಾ ಉದಯ್‌ಕುಮಾರ್ ವಂದಿಸಿ, ಪತ್ರಿಕೋದ್ಯಮ ವಿದ್ಯಾರ್ಥಿನಿ ದಿಶಾ ಶೆಟ್ಟಿ ನಿರೂಪಿಸಿದರು.