Kundapra.com ಕುಂದಾಪ್ರ ಡಾಟ್ ಕಾಂ

ಕುಂದಗನ್ನಡದ ಪದಗುಚ್ಚಗಳ ಸಂಗ್ರಹ ಕಾರ್ಯ ನಡೆಯಬೇಕಿದೆ: ಎಎಸ್‌ಎನ್ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದನಾಡಿನ ಜೀವನ ಸಂಸ್ಕೃತಿಯ ಪ್ರತೀಕವಾಗಿಹ ನೆಲಪರ – ಜೀವಪರವಾದ ಕುಂದಾಪ್ರ ಕನ್ನಡದ ಭಾಷಾ ಪರಂಪರೆಯು, ಆಧುನಿಕತೆಯ ನಾಗಾಲೋಟದಲ್ಲಿ ತನ್ನ ಮೂಲ ಸೊಗಡನ್ನು ಕಳಚಿಕೊಳ್ಳುತ್ತಿರುವುದು ದುರಂತ. ಯಥೇಚ್ಚ ಬಳಕೆಯೊಂದಿಗೆ ಪದಗುಚ್ಚಗಳ ಸಂಗ್ರಹಕಾರ್ಯ ನಡೆದಾಗಲೇ ಕುಂದಾಪ್ರ ಕನ್ನಡ ಬರಡಾಗದೇ ಸದಾ ಫಲವತ್ತಾಗಿರಲು ಸಾಧ್ಯ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಎ. ಎಸ್. ಎನ್ ಹೆಬ್ಬಾರ್ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ’ವಿಶ್ವ ಕುಂದಾಪ್ರ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತದ ಶಾಸಕ ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಮಾತನಾಡಿ .ಪ್ರಕೃತಿ ಸಹಜವಾಗಿಯೇ ಗಡಸುತನ – ಚುರುಕುತನವನ್ನು ತನ್ನೊಳಗೆ ಆಲಂಗಿಸಿಕೊಂಡಿರುವ ಕುಂದಾಪ್ರ ಕನ್ನಡವು ಆಡಂಬರರಹಿತವಾದ ಹೃದಯಾಂತರಾಳದ ಭಾಷೆ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಶುಭಶಂಸನೆ ಗೈದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬಾಂಡ್ಯ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಅನಿಲ್ ಚಾತ್ರಾ, ವಿಶ್ವಾಸ್ ಸೋನ್ಸ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಿತ್ ಶೆಟ್ಟಿ ಮತ್ತು ಸುಚಿತ್ರಾ ಉಪಸ್ಥಿತರಿದ್ದರು.

ಈ ಸಂದರ್ಭ ಜಾನಪದ ಹಾಡುಗಾರ್ತಿ ರೋಹಿಣಿ ಶೆಡ್ತಿ ಗುಡ್ಡಮ್ಮಾಡಿಯವರನ್ನು ಸನ್ಮಾನಿಸಲಾಯಿತು. ಗಂಟಿ-ಕರು-ಬೇಸಾಯ-ಸಾಗುವಳಿಯಂತಹ ಕೃಷಿಪರ ಬದುಕಿನ ಔಚಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ, ಭತ್ತ ಕುಟ್ಟುವ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ತೃತೀಯ ಬಿ.ಕಾಂ. ವಿದ್ಯಾರ್ಥಿ ಶರತ್, ಕನ್ನಡ ಉಪನ್ಯಾಸಕ ಸುಕುಮಾರ ಶೆಟ್ಟಿ ರಚಿಸಿದ ’ಅಬ್ಬಿ ಬೈಗುಳಿ’ ಕುಂದಾಪುರ ಕನ್ನಡ ಪದ್ಯವನ್ನು, ಕೊಡಗನ ಕೋಳಿ ನುಂಗಿತ್ತಾ ಜಾನಪದ ಶೈಲಿಯಲ್ಲಿ ಹಾಡಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯೋಜಕ ಸುಕುಮಾರ್ ಶೆಟ್ಟಿ ಕಮಲಶಿಲೆ ಸ್ವಾಗತಿಸಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಯೋಗೀಶ್ ಶ್ಯಾನುಭೋಗ್ ನಿರೂಪಿಸಿದರು.

Exit mobile version