Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿಯ ಚುರುಕು, ಘಟ್ಟದ ನಯವಂತಿಕೆ ಕುಂದಗನ್ನಡಿಗರಲ್ಲಿ ಬೆರೆತಿದೆ: ಶಾಸಕ ಬಿ.ಎಂ.ಎಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿಯ ಚುರುಕುತನ ಹಾಗೂ ಪಶ್ಚಿಮ ಘಟ್ಟ ಭಾಗದ ನಯವಂತಿಕೆ ಕುಂದಾಪ್ರ ಕನ್ನಡಿಗರಲ್ಲಿ ಬೆರೆತಿದ್ದು ವಿಶ್ವದಾದ್ಯಂತ ಉದ್ಯಮ ಹಾಗೂ ಕಲಾ ಜಗತ್ತಿನ ಮೂಲಕ ಹೆಸರು ಮಾಡಲು ಸಾಧ್ಯವಾಗಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇಲ್ಲಿನ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನ ಶಾರದಾ ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ಜರುಗಿದ ಹ್ವಾಯ್ ಬನಿ ಕೂಕಣಿ ಸ್ನೇಹ ಸಮ್ಮಿಲನ – 2019ನ್ನು ಉದ್ಘಾಟಿಸಿ ಮಾತನಾಡಿದರು.

ಭಾಷೆಯ ಕಾರಣದಿಂದಾಗಿ ವಿಶ್ವದ ಎಲ್ಲಿಗೇ ಹೋದರು ಅವಿಭಜಿತ ಕುಂದಾಪುರದವರನ್ನು ಗುರುತಿಸುತ್ತಾರೆ. ಇಲ್ಲಿನ ಹತ್ತಾರು ಸಾಧಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಕುಂದಾಪುರ ಕ್ಷೇತ್ರದಂತೆಯೇ ಬೈಂದೂರು ಕ್ಷೇತ್ರವೂ ಮೂಲಭೂತ ಸೌಕರ್ಯಗಳನ್ನು ಹೊಂದುವುದಲ್ಲದೇ ಎಲ್ಲಾ ಆಯಾಮಗಳಲ್ಲಿಯೂ ಪ್ರಗತಿ ಸಾಧಿಸಬೇಕಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದವರು ಭರವಸೆಯಿತ್ತರು.

ಗಲ್ಫ್ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ ಮರವಂತೆ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಎಸ್. ನಿತ್ಯಾನಂದ ಪೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ತ್ರಾಸಿ, ಉದ್ಯಮಿ ರಿಯಾಜ್ ಅಹಮ್ಮದ್ ಬೈಂದೂರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಉದ್ಯಮಿ, ಪ್ರಗತಿಪರ ಕೃಷಿಕ ರಿಚರ್ಡ್ ರೆಬೆಲ್ಲೊ, ಬೈಂದೂರು ಸ.ಪ್ರ.ದ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿ ಲತಾ ಪೂಜಾರಿ, ಜಾದೂಗಾರ, ಸಾಹಿತಿ ಓಂ ಗಣೇಶ್ ಉಪ್ಪುಂದ, ಶೀನ ದೇವಾಡಿಗ ದುಬೈ, ಪ್ರಕಾಶ್ ಬೊರೆಟ್ಟೊ ದುಬೈ, ಬೈಂದೂರು ಲಾವಣ್ಯ ಅಧ್ಯಕ್ಷ ಉದಯ ಆಚಾರ್ಯ, ರೋಟರಿ ಬೈಂದೂರು ಅಧ್ಯಕ್ಷ ಪ್ರಕಾಶ್ ಭಟ್, ಜೆಸಿಐ ಬೈಂದೂರು ಅಧ್ಯಕ್ಷ ಮಣಿಕಂಠ ದೇವಾಡಿಗ ಮೊದಲಾದವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಮತ್ತು ದತ್ತು ಸ್ವೀಕಾರ ಹಾಗೂ ಕುಂದಾಪ್ರ ಕನ್ನಡದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಬಹ್ರೈನ್ ಕನ್ನಡ ಸಂಘದ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕತಾರ್ ಕನ್ನಡ ಸಂಘದ ಸುಬ್ರಹ್ಮಣ್ಯ ಹೆಬ್ಬಾಗಿಲು ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ಅರುಣಕುಮಾರ್ ಶಿರೂರು ವಂದಿಸಿದರು.

 

Exit mobile version