Kundapra.com ಕುಂದಾಪ್ರ ಡಾಟ್ ಕಾಂ

ಯುವವಾಹಿನಿ: ಗೋವಿಂದ ಬಾಬು ಪೂಜಾರಿ ಅವರಿಗೆ ಯುವ ಸಾಧನಾ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವವಾಹಿನಿ ರಿ. ಮಂಗಳೂರು ಇದರ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರು ಭಾನುವಾರ ಜರುಗಿದ 32ನೇ ವಾರ್ಷಿಕ ಸಮಾವೇಶದಲ್ಲಿ ಯಶಸ್ವಿ ಉದ್ಯಮಿ ಹಾಗೂ ಸಾಧಕ ಗೋವಿಂದ ಬಾಬು ಪೂಜಾರಿ ಅವರಿಗೆ ‘ಯುವ ಸಾಧನಾ’ ಪುರಸ್ಕಾರ ಪ್ರದಾನ ಮಾಡಲಾಯಿತು.

ಪುತ್ತೂರು ಉಪವಿಭಾಗ ಸಹಾಯಕ ಕಮಿಷನರ್ ಹೆಚ್. ಕೆ. ಕೃಷ್ಣಮೂರ್ತಿ, ರಾಜ್ಯದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಆರ್ಥಿಕ ಹಾಗೂ ಶಿಕ್ಷಣ ತಜ್ಞ ಸಿ. ಕೆ. ಅಂಚನ್, ಚಲನಚಿತ್ರ ನಿರ್ಮಾಪಕ, ನಟ ಡಾ. ರಾಜಶೇಖರ್ ಕೋಟ್ಯಾನ್, ನಟಿ ನವ್ಯ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ರಿ. ಮಂಗಳೂರು ಇದರ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಸುನಿಲ್ ಅಂಚನ್, ೩೨ನೇ ವಾರ್ಷಿಕ ಸಮಾವೇಶದ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರು, ಯುವವಾಹಿನಿಯ ವಿವಿಧ ಘಟಕಗಳು ಪದಾಧಿಕಾರಿಗಳು ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಮಣಿಪಾಲದ ಉದಯ ಸಮೂಹ ಸಂಸ್ಥೆಗಳ ಪ್ರವರ್ತಕ ರಮೇಶ್ ಎ. ಬಂಗೇರ ಅವರಿಗೆ ಸಾಧನಾಶ್ರೀ ಪ್ರಶಸ್ತಿ, ಗುರುದೇವಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸಾಧನಾ ಶ್ರೇಷ್ಠ ಪ್ರಶಸ್ತಿ ಹಾಗೂ ಸಾಧಕ ಗೋವಿಂದ ಪೂಜಾರಿ, ಪ್ರಕಾಶ್ ಅಂಚನ್ ಅವರಿಗೆ ಯುವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಧಕ ಗೋವಿಂದ ಬಾಬು ಪೂಜಾರಿ:
ಗೋವಿಂದ ಬಾಬು ಪೂಜಾರಿ ಅವರು 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದ್ದರು. 2015ರಲ್ಲಿ ಅದನ್ನು ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪೈವೆಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. ಈಗ ಪೂನಾ, ಹೈದರಾಬಾದ್, ಬೆಂಗಳೂರು, ಛತ್ತಿಸ್‌ಗಡ ಹಾಗೂ ತಿರುಪತಿಯಲ್ಲಿ ಇದೇ ಉದ್ಯಮ ವಿಸ್ತರಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳಲ್ಲಿ ಕರ್ನಾಟಕ ಸರಕಾರದ ಹಸಿವು ಮುಕ್ತ ಯೋಜನೆ ಜಾರಿಗೊಳಿಸಿ ಇಂದಿರಾ ಕ್ಯಾಂಟಿನ್ ಆರಂಭಿಸಿದಾಗ ಶೆಫ್‌ಟಾಕ್ ಅದರ ನಿರ್ವಹಣೆ ಹೊಣೆ ಹೊತ್ತು ಸಾವಿರಾರು ಮಂದಿಗೆ ಆಹಾರ ಒದಗಿಸುತ್ತಿದೆ.

ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ತಮ್ಮ ಉದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವಾಗುತ್ತಿದ್ದಾರೆ.

ಅವರ ಕಂಪೆನಿಗೆ ಇತ್ತಿಚಿಗೆ ಮುಂಬೈನ ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯಮ ಸಮಾವೇಶಲ್ಲಿ ’ಉದ್ಯಮ ಶ್ರೇಷ್ಠತಾ ಪ್ರಶಸ್ತಿ’, ೨೦೧೬ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ಶೆಫ್‌ಟಾಕ್ ಹಾಗೂ ಆಡಳಿತ ನಿರ್ದೇಶಕ ಗೋವಿಂದ ಪೂಜಾರಿ ಅವರಿಗೆ ’ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ, ಆಹಾರೋದ್ಯಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.

 

Exit mobile version