ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯೋಗೀಂದ್ರ ಮರವಂತೆ ಒಬ್ಬ ಸಂವೇದನಾಶೀಲ ಬರಹಗಾರ. ’ಲಂಡನ್ ಡೈರಿ-ಅನಿವಾಸಿಯ ಪುಟಗಳು’ ಹೆಸರಿನ ಅವರ ಲೇಖನಗಳ ಸಂಗ್ರಹದಲ್ಲಿ ಇಂಗ್ಲಂಡ್‌ನ ಜನರ ಬದುಕು ಮತ್ತು ಸನ್ನಿವೇಶಗಳೆಡೆಗಿನ ಒಳನೋಟಗಳಿಂದ ಕೂಡಿದ ಮನಸ್ಸಿಗೆ ಮುದ ನೀಡುವ ಲಲಿತ ಪ್ರಬಂzsಗಳಿವೆ ಎಂದು ಹಿರಿಯ ಲೇಖಕ ಡಾ. ಬಿ. ಜನಾರ್ದನ ಭಟ್ ಹೇಳಿದರು.
ಕುಂದಾಪುರದ ಹೋಟೆಲ್ ಹರಿಪ್ರಸಾದದಲ್ಲಿಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಹೊಸಪೇಟೆಯ ಯಾಜಿ ಪ್ರಕಾಶನ ಹೊರತಂದಿರುವ ಯೋಗೀಂದ್ರ ಅವರ ಬಿಡಿಲೇಖನಗಳ ಸಂಗ್ರಹ ’ಲಂಡನ್ ಡೈರಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತೀಯ ಬದುಕಿನ ಹಿನ್ನೆಲೆಯಿಂದ ಇಂಗ್ಲಂಡ್ ಜನಜೀವನದೊಂದಿಗೆ ಮುಖಾಮುಖಿ ಆಗುವಾಗ ಹುಟ್ಟುವ ದ್ವಂದ್ವದ ವೇಳೆ ಅವರು ತೀರ ಸೂಕ್ಷ್ಮಗ್ರಾಹಿಗಳಾಗಿ ಅದ್ಭುತ ಚಿತ್ರಗಳನ್ನು ಕಟ್ಟಿಕೊಡುತ್ತಾರೆ. ಅವುಗಳಲ್ಲಿ ವಿಷಯದ ಮೂಲಕ್ಕೆ ಹೋಗುವ ಗುಣ, ಪತ್ರಕರ್ತನ ಶೋಧಕ ದೃಷ್ಟಿ ಇರುತ್ತದೆ. ಇವು ಒಬ್ಬ ಪ್ರಬುದ್ಧ ಬರಹಗಾರನಲ್ಲಿ ಮಾತ್ರಕಾಣಬಹುದಾದ ಕೌಶಲ. ಅವರು ತಮ್ಮ ಬರಹಕ್ಕೆ ತಾವು ಪಳಗಿಸಿಕೊಂಡ ಚೇತೋಹಾರಿಯಾದ ಭಾಷೆಯನ್ನು ಬಳಸುತ್ತಾರೆ. ಅದಕ್ಕೆ ಓದುಗನನ್ನು ಸೆಳೆಯುವ ವಿಶಿಷ್ಟ ಗುಣ ಇದೆ. ಸಂಗ್ರಹದ ಕೆಲವು ಲೇಖನಗಳು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳ್ಳಬಹುದಾದ ಮೌಲಿಕತೆ ಹೊಂದಿವೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪರಿಚಯ ಮಾಡಿದ ನಿಟ್ಟೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಯಶೋದಾ ಆರ್. ಉಡುಪ ಲಂಡನ್ ಡೈರಿ ಪ್ರವಾಸ ಕಥನ ಅಲ್ಲ. ಇಂಗ್ಲಂಡ್ ಜನಜೀವನವನ್ನು ಅಲ್ಲಿನ ದೀರ್ಘಕಾಲದ ನಿವಾಸಿಯೊಬ್ಬ ಅನಿವಾಸಿಯ ಶೋಧಕ ಕಣ್ಣುಗಳಿಂದ ಒಳಹೊಕ್ಕು ನೋಡುವ ಮೂಲಕ ಪಡೆದ ಅನುಭವಗಳನ್ನು ಓದುಗರ ಮುಂದಿರಿಸುವ ಕಥನ ಎಂದು ಹೇಳಿದರು.
ಕೇದಾರ ಮರವಂತೆ ಪ್ರಾರ್ಥನೆ ಹಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಪ್ರದೀಪ ಕೆಂಚನೂರು ಅತಿಥಿಗಳನ್ನು ಪರಿಚಯಿಸಿದರು. ಜತೀಂದ್ರ ಮರವಂತೆ ವಂದಿಸಿದರು. ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕಿಶೋರ್‌ಕುಮಾರ ಶೆಟ್ಟಿ ನಿರೂಪಿಸಿದರು. ಯೋಗೀಂದ್ರ ಮರವಂತೆ ಮತ್ತು ಜನಾರ್ದನ ಮರವಂತೆ ಇದ್ದರು.