Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳದ ಆನೆ ಇಂದಿರಾ ನಿಧನ. ಸಾರ್ವಜನಿಕರಿಂದ ಅಂತಿನ ನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು, ಅ.14:ಕಳೆದು ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಕೊಲ್ಲೂರು ದೇವಸ್ಥಾನದ ಹೆಣ್ಣಾನೆ ಇಂದಿರಾ ಮಂಗಳವಾರ ರಾತ್ರಿ ಅಸುನೀಗಿದ್ದು, ಬುಧವಾರ ಸಂಜೆ ಇಲ್ಲಿನ ಕಲ್ಯಾಣಗುಡ್ಡೆಯಲ್ಲಿರುವ ಆನೆಯ ಶಡ್ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕಳೆದ 22 ವರ್ಷಗಳ ಹಿಂದೆ ಕೊಲ್ಲೂರು ದೇವಳಕ್ಕೆ ದಾನವಾಗಿ ಬಂದಿದ್ದ ಹೆಣ್ಣಾನೆ ದೇವಳದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಆನೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಕೊಲ್ಲೂರು ಪೇಟೆಯಲ್ಲಿ ರಿಕ್ಷಾ ಜೀಪುಗಳನ್ನು ಸ್ಥಗಿತಗೊಳಿಸಿ, ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಬಾಳೆಹೊನ್ನೂರಿನ ಮಧು ಎನ್ನುವವರು ದಾನ ನೀಡಿದ್ದ ಆನೆಗೆ ಐಯಣ್ಣ ಮಾವುತರಾಗಿದ್ದರು. ದೇವಸ್ಥಾನದ ಅಂದಿನ ಮೊಕ್ತೆಸರರಾಗಿದ್ದ ಬಿ. ಅಪ್ಪಣ್ಣ ಹೆಗ್ಡೆ ಅವರ ಅವಧಿಯಲ್ಲಿ ಇಂದಿರಾ ಎಂಬ ನಾಮಕರಣ ಮಾಡಲಾಗಿತ್ತು. ಪ್ರತಿದಿನ ಬೆಳಿಗ್ಗೆ ದೇವಸ್ಥಾನದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿ ದೇವಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಧ್ವಜಕ್ಕೆ ವಂದಿಸಿ, ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಿ ಕೊಠಡಿಯಲ್ಲಿರುವವರಿಗೆ ಹಾರೈಸಿ ಬಳಿಕ ದೇವಳದ ಹೊರ ಆವರಣದಲ್ಲಿ ನಿಲ್ಲುವುದು ವಾಡಿಕೆಯಾಗಿತ್ತು.

ಧಾರ್ಮಿಕ ವಿಧಿ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕ ಸಿದ್ಧಪಡಿಸಲಾಗಿದ್ದ ಕಟ್ಟಿಗೆ, ಐದು ಡಬ್ಬಿ ತುಪ್ಪ, ಗಂಧ ಚಿತೆಯಲ್ಲಿ ಸಂಜೆಯ ಹೊತ್ತಿಗೆ ಆನೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

Exit mobile version