Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆ: ವಿಪತ್ತು ನಿರ್ವಹಣಾ ತರಬೇತಿಗೆ ಯುವಕರಿಂದ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಆಸಕ್ತ ಯುವಕರುಗಳಿಗೆ ವಿಪತ್ತು ನಿರ್ವಹಣೆಯ ತರಬೇತಿಯನ್ನು ಆಯೋಜಿಸಿದ್ದು, ಪ್ರತಿ ತಾಲೂಕು ಹಂತದಲ್ಲಿ ಸ್ವಯಂ ಸೇವಕರುಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ಸೆಪ್ಟೆಂಬರ್ ಮೊದಲ ವಾರದಿಂದ ಆಯ್ಕೆಯಾಗುವ ಪ್ರತಿ ತಂಡಕ್ಕೆ 6 ದಿನಗಳ ತರಬೇತಿ ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ ತರಬೇತಿಗೆ ಆಯ್ಕೆಯಾಗುವ ಸ್ವಯಂ ಸೇವಾ ಯುವಕರುಗಳ ಪ್ರಯಾಣ ಭತ್ಯೆ, ಊಟ ಹಾಗೂ ವಸತಿ ವೆಚ್ವವನ್ನು ನೆಹರು ಯುವಕೇಂದ್ರದಿಂದಲೇ ಭರಿಸಲಾಗುತ್ತದೆ.

ಜಿಲ್ಲೆಯ ಪ್ರತಿ ತಾಲೂಕುಗಳಿಂದ ಸ್ವಯಂ ಸೇವಾ ಮನೋಭಾವವುಳ್ಳ ಯುವಕರುಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಉಡುಪಿ ರಜತಾದ್ರಿಯಲ್ಲಿರುವ ನೆಹರು ಯುವ ಕೇಂದ್ರದಿಂದ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸುವವರು 22 ರಿಂದ 29 ವರ್ಷ ವಯಸ್ಸಿನ ಸೇವಾ ಮನೋಭಾವದ ಯುವಕರಾಗಿದ್ದು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯಲ್ಲಿ ಭಾಗವಹಿಸುವ ಯುವಕರು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಕರವಾಗಿದ್ದು, ಧೈರ್ಯವಾಗಿ ಕಠಿಣ ಸಂದರ್ಭವನ್ನು ಎದುರಿಸುವವರಾಗಿರಬೇಕು. ತಮ್ಮ ಗ್ರಾಮದ ಬಗ್ಗೆ ಅರಿವಿದ್ದು, ಊರಿಗೆ ವಿಪತ್ತು ಒದಗಬಹುದಾದ ಸಂದರ್ಭದಲ್ಲಿ ವಿಪತ್ತು ತಗ್ಗಿಸಲು ಶೀಘ್ರವಾಗಿ ಸ್ವಂದಿಸುವವರಾಗಿರಬೇಕು. ಗ್ರಾಮದ ಯುವಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು, ಈಗಾಗಲೇ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ತುರ್ತು ಸಂದರ್ಭದಲ್ಲಿ ಕರೆಗೆ ಪ್ರತಿಕ್ರಿಯಿಸುವವರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗಸ್ಟ್ 20 ಕೊನೆಯ ದಿನವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫೆಡ್ ಡಿಸೋಜಾ ಅವರ ಮೊಬೈಲ್ ಸಂಖ್ಯೆ 9958325151 ಸಂಪರ್ಕಿಸುವಂತೆ ಕೋರಲಾಗಿದೆ.

ದೇಶದಲ್ಲಿ ಪ್ರಾಯೋಜಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಕರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಈ ಪೈಕಿ ಕರ್ನಾಟಕದ ಉಡುಪಿ ಜಿಲ್ಲೆ ಆಯ್ಕೆಯಾಗಿದೆ. ವಿಪತ್ತು ನಿರ್ವಹಣಾ ತಂಡಕ್ಕಾಗಿ ಈ ವರ್ಷ ಜಿಲ್ಲೆಯ ಏಳು ತಾಲೂಕುಗಳ ತಲಾ 30 ಯುವಕರಿಗೆ ತರಬೇತಿ ನೀಡಲಾಗುತ್ತಿದೆ.

Exit mobile version