Kundapra.com ಕುಂದಾಪ್ರ ಡಾಟ್ ಕಾಂ

ಗಡಿಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಂತೆ ಕಾಣುವುದು ಮುಖ್ಯ: ಪ್ರದೀಪ ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಪಂಚದಲ್ಲಿ ಯಾರು ಯಾರಿಗಿಂತಲೂ ಕಡಿಮೆಯೂ ಅಲ್ಲ. ಹೆಚ್ಚು ಅಲ್ಲ. ಜಾತಿ, ಧರ್ಮ, ಭಾಷೆಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನಂತೆ ಕಾಣುವುದು ಮುಖ್ಯವಾದುದೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪ ಕುಮಾರ್ ಶೆಟ್ಟಿ ಕೆಂಚನೂರು ಹೇಳಿದರು.

ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಸುರಭಿ ರಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ಜರುಗಿದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿ ಬಣ್ಣ, ತಿನಿಸು, ಪ್ರಕೃತಿ ಎಲ್ಲದರಲ್ಲಿಯೂ ಭಿನ್ನತೆ ಇರುವಾಗ ಪ್ರಕೃತಿಯ ಭಾಗವೇ ಆಗಿರುವ ಮನುಷ್ಯರೆಲ್ಲರೂ ಒಂದೇ ರೀತಿಯಾಗಿ ಬದುಕಬೇಕು ಎಂಬುದರಲ್ಲಿ ಅರ್ಥವಿಲ್ಲ. ವಿವಿಧತೆಯನ್ನು ಗೌರವಿಸುತ್ತಲೇ ಏಕತೆಯನ್ನು ಸಾರುವುದು ಅಗತ್ಯ ಎಂದರು.

ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅತಿಥಿಗಳಾಗಿದ್ದರು.

ನೆಹರು ಯುವ ಕೇಂದ್ರದ ಸ್ವಯಂಸೇವಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಾಸ್ತಾವಿಕ ಮಾತನಾಡಿ ಬಳಿಕ ಸದ್ಭಾವನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸುರಭಿ ರಿ. ಬೈಂದೂರು ಇದರ ನಿರ್ದೇಶಕ ಸುಧಾಕರ ಪಿ. ಸ್ವಾಗತಿಸಿ, ಉಪಾಧ್ಯಕ್ಷ ಆನಂದ ಮದ್ದೋಡಿ ವಂದಿಸಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

 

Exit mobile version