ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘವು 2018-19 ಆರ್ಥಿಕ ವರ್ಷದಲ್ಲಿ 16.20 ಕೋಟಿ ರೂ. ಠೇವಣಿ ಸಂಗ್ರಹಿಸಿ, 13.19 ಕೋಟಿ ರೂ. ಸಾಲ ನೀಡಿ ಉತ್ತಮ ವ್ಯವಹಾರ ನಡೆಸಿ ವಾರ್ಷಿಕ 31.20 ಲಕ್ಷ ರೂ. ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.15ರ ಡಿವಿಡೆಂಟ್ ವಿತರಿಸಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ’ಎ’ ದರ್ಜೆಯನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಮೋಹನ ಪೂಜಾರಿ ಉಪ್ಪುಂದ ಹೇಳಿದರು.
ಅವರು ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ಜರುಗಿದ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇದರ 28ನೇ ವಾರ್ಷಿಕ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದ ಜನರಿಗೆ ಉತ್ತಮ ಸೇವೆ ಒದಗಿಸಲು ಸಂಸ್ಥೆ ಬದ್ಧವಾಗಿದ್ದು, ಮುಂದಿನ ಆರ್ಥಿಕ ವರ್ಷಗಳಲ್ಲಿ ಸಂಘದ ಪ್ರಧಾನ ಕಛೇರಿಗೆ ನೂತನ ಸಹಕಾರಿ ಕಟ್ಟಡ ನಿರ್ಮಾಣ, ಕಾರ್ಯಕ್ಷೇತ್ರದ ವ್ಯಾಪ್ತಿಯ ಶಿರೂರಿನಲ್ಲಿ ಶಾಖೆ ತೆರೆಯುವುದು, ಸಂಸ್ಥೆಯಲ್ಲಿ ಠೇವಣಿ ಹಾಗೂ ಸಾಲವನ್ನು ಹೆಚ್ಚಿಸಿ ಗರಿಷ್ಠ ಲಾಭ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದ ಅವರು ಸಂಘದಲ್ಲಿ ಸಾಲ ಹೊಂದಿರುವ ಸದಸ್ಯರು ಮೃತರಾದರೇ ಅವರ ಕುಟುಂಬಕ್ಕೆ ಪ್ರೋತ್ಸಾಹಧನವಾಗಿ ರೂ. 5,000 ಸಾಲದಲ್ಲಿ ಕಡಿತಗೊಳಿಸುವುದು ಹಾಗೂ ’ಎ’ ತರಗತಿ ಸದಸ್ಯರು ಮೃತರಾದರೇ ಅವರ ಕುಟುಂಬಕ್ಕೆ ರೂ. 2,000 ನೀಡುವ ಯೋಜನೆಯ ಬಗ್ಗೆ ಘೋಷಿಸಿದರು.
ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಪೂಜಾರಿ, ನಿರ್ದೇಶಕರುಗಳಾದ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಎಂ. ಮಂಜು ಪೂಜಾರಿ, ರಾಜು ಪೂಜಾರಿ ಕೆರ್ಗಾಲು, ಶೇಷು ಪೂಜಾರಿ, ಸುರೇಶ್ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಎಚ್. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.
