Site icon Kundapra.com ಕುಂದಾಪ್ರ ಡಾಟ್ ಕಾಂ

ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ, ಶ್ರೀ ಇಂದುಧರ ಯುವಕ ಮಂಡಲ ಗಂಗೊಳ್ಳಿ, ಶ್ರೀ ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೋಮವಾರ ಜರಗಿದ ಕಾರ್ಯಕ್ರಮದಲ್ಲಿ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್.ಗಣೇಶ ಕಾಮತ್ ಮಾತನಾಡಿ, ಸುಮನಾ ಪಡಿಯಾರ್ ಮಕ್ಕಳನ್ನು ಬರೀ ಅಂಗಳಿಗೆ ಮಾತ್ರ ಸೀಮಿತಗೊಳಿಸದೆ ಅವರ ಮನಸ್ಸು ಮತ್ತು ಭಾವನೆಗಳಿಗೆ ಪೂರಕವಾಗಿ ಸ್ಥೈರ್ಯ, ಆತ್ಮವಿಶ್ವಾಸ, ಪ್ರೀತಿ ತುಂಬಿಸಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿಸಿದ್ದಾರೆ. ಇವರ ಸೇವೆ ಅವಿಸ್ಮರಣೀಯವಾದುದು ಎಂದರು.

ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸಮಾಜ ಸೇವಕ ಜಿ.ಗಣಪತಿ ಶಿಪಾ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ಶಾಲೆಯ ಮುಖ್ಯೋಪಾಧ್ಯಾಯ ಜಿ.ವಿಶ್ವನಾಥ ಭಟ್ ಶುಭ ಹಾರೈಸಿದರು. ದೇವಸ್ಥಾನದ ಮುಕ್ತೇಸರ ಸಂಜೀವ ಜಿ.ಟಿ., ಶ್ರೀನಿವಾಸ ಬಿ., ಪ್ರಧಾನ ಅರ್ಚಕ ಶಿವ ಜಿ.ಟಿ., ವಿಘ್ನೇಶ ಜಿ.ಟಿ., ಸುದೀಪ ಜಿ.ಎನ್., ಅಣ್ಣಯ್ಯ ಜಿ.ಎಂ., ನರಸಿಂಹ ಜಿ.ಎಂ., ಜಿ.ಈಶ್ವರ, ಗಿರಿಜ, ಸೌಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ಅಧ್ಯಕ್ಷ ಸುಂದರ ಬಿ. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಬಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version