ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶರೀರ ಹಾಗೂ ಮನಸ್ಸಿಗೆ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹಾಗೂ ಚೈತನ್ಯವು ಕ್ರೀಡೆ ಹಾಗೂ ವ್ಯಾಯಾಮದಲ್ಲಿದ್ದು, ನಿಯಮಿತ ಅಭ್ಯಾಸದಿಂದ ಆರೋಗ್ಯವೂ ಸಧೃಡವಾಗಿರಲಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ವಾಸು ಗಾಣಿಗ ಹೇಳಿದರು.
ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕೊಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಆಯೋಜಿಸಲಾದ ಆಯೋಜಿಸಲಾದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಕಂಡ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಪ್ರಧಾನಿ ಮಂತ್ರಿಗಳು ಕ್ರೀಡಾ ದಿನದಂದೇ ಫಿಟ್ ಇಂಡಿಯಾ ಕ್ಯಾಂಪೆನ್ ಆರಂಭಿಸಿರುವುದರ ಹಿಂದ ಸದೃಢ ಸಮಾಜ ನಿರ್ಮಾಣದ ಕಲ್ಪನೆ ಅಡಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ ಕ್ರೀಡೆ ಬದುಕಿನ ಒಂದು ಅಂಗವೇ ಆಗಿದ್ದು, ಓದಿನಷ್ಟೇ ಕ್ರೀಡೆಗೂ ಮಹತ್ವ ನೀಡಿದರೆ ಮನಸ್ಸು ದೇಹ ಎರಡೂ ಸುಸ್ಥಿತಿಯಲ್ಲಿರುತ್ತದೆ ಎಂದರು.
ಈ ಸಂದರ್ಭ ಅಟ್ಲೆಟಿಕ್ಸ್ ಹಾಗೂ ನೆಟ್‌ಬಾಲ್‌ನಲ್ಲಿ ಸಾಧನೆಗೈದ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ನವಶಕ್ತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಸ.ಹಿ.ಪ್ರಾ ಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಅತಿಥಿಗಳಾಗಿದ್ದರು.
ನವಶಕ್ತಿ ಮಹಿಳಾ ವೇದಿಕೆಯ ಸದಸ್ಯೆಯರಾದ ಜಯಲಕ್ಷ್ಮೀ ಸ್ವಾಗತಿಸಿ, ಸುಜಾ ಕಾರ್ಯಕ್ರಮ ನಿರೂಪಿಸಿದರು.
