ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂತನ ಡಿವೈಎಸ್ಪಿ ಆಗಿ 2012 ಬ್ಯಾಚಿನ ಐಪಿಎಸ್ ಅಧಿಕಾರಿ ಹರಿರಾಂ ಶಂಕರ್ ಗುರುವಾರ ಅಧಿಕಾರ ಸ್ವೀಕರಿಸಿದ್ದು, ಇಲ್ಲಿನ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮಿತ ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು.
ಕೇರಳದ ತ್ರಿಶೂರ್ ಮೂಲದ ಹರಿರಾಂ ಶಂಕರ್ 2012 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು ಟ್ರೈನಿಂಗ್ ಮುಗಿಸಿ ಬೆಳಗಾಂನ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿದ್ದು ಬಳಿಕ ಎರಡು ತಿಂಗಳು ಹೈದರಬಾದಿನಲ್ಲಿ ಎರಡನೇ ಹಂತದ ತರಬೇತಿ ಮುಗಿಸಿ ಕುಂದಾಪುರ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕ್ಯಾಲಿಕಟ್ ಎನ್.ಐ.ಟಿ.ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು. ಹಲವು ವರ್ಷಗಳ ಬಳಿಕ ಕುಂದಾಪುರಕ್ಕೆ ಐಪಿಎಸ್ ದರ್ಜೆ ಅಧಿಕಾರಿ ನೇಮಿಸಿದ್ದು ನಾಗರಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಮೂಡಿಸಿದೆ.
ಈ ಸಂದರ್ಭ ಕುಂದಾಪುರ ಸಿಪಿಐ ಮಂಜಪ್ಪ, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ಕುಂದಾಪುರ ಎಸ್ಸೈ ಹರೀಶ್ ಆರ್. ನಾಯಕ್ ವಿವಿಧ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಇದ್ದರು.
ಹರಿರಾಂ ಶಂಕರ್ ಏನಂದ್ರು…
ಕುಂದಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನೂತನ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಉಪವಿಭಾಗ ಅಧಿಕಾರಿಗಳ ಉತ್ತಮ ಕಾರ್ಯವೈಖರಿಯಿಂದಾಗಿ ಎಲ್ಲವೂ ಶಾಂತಿಯುತವಾಗಿದ್ದು ಅದನ್ನು ಮುಂದುವರೆಸಲು ಕ್ರಮಕೈಗೊಳ್ಳಲಾಗುತ್ತದೆ. ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಹೆಚ್ಚಿನ ಗಮನ ನೀಡಲಾಗುತ್ತದೆ. ಉಪವಿಭಾಗ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದು ಇನ್ನೂ ಪತ್ತೆಯಾಗದಿರುವ ಕೊಲೆ, ಕಳ್ಳತನ ಮೊದಲಾದ ಅಪರಾಧ ಚಟುವಟಿಕೆಗಳ ಬಗ್ಗೆ ವಿಮರ್ಷಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುತ್ತದೆ ಎಂದರು.
ಕೆಲವೊಂದು ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಗಳಿದ್ದು ಇಂತಹ ಜಾಗಗಳನ್ನು ಗುರುತಿಸಲಾಗುತ್ತದೆ. ಫ್ಲೈಓವರ್ ಹಾಗೂ ರಸ್ತೆ ಕಾಮಗಾರಿಯು ಬಾಕಿಯಿದ್ದು ಅದನ್ನೆಲ್ಲಾ ಪರಿಶೀಲಿಸಿ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.