Kundapra.com ಕುಂದಾಪ್ರ ಡಾಟ್ ಕಾಂ

ಸಂಘಟನೆಯಲ್ಲಿ ಹೊಂದಾಣಿಕೆಯಿಂದ ಗುರಿ ಸಾಧನೆ: ರಘುರಾಮ ದೇವಾಡಿಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇವಾಡಿಗ ಸಮುದಾಯವು ದೀರ್ಘಕಾಲ ತುಳಿತಕ್ಕೆ ಒಳಗಾಗಿತ್ತು. ಶ್ರಮಪಟ್ಟು ಸಂಘಟಿತವಾಗಿ ಇದೀಗ ಸಮಾಜದ ಪ್ರಧಾನ ವಾಹಿನಿಗೆ ಸೇರಿಕೊಳ್ಳುತ್ತಿದೆ. ಅದನ್ನು ಇನ್ನಷ್ಟು ಉನ್ನತಿಗೊಯ್ಯಲು ಎಲ್ಲ ಹಂತಗಳಲ್ಲೂ ಅದು ಸಂಘಟಿತವಾಗಬೇಕು ಎಂದು ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಆಲೂರು ರಘುರಾಮ ದೇವಾಡಿಗ ಹೇಳಿದರು.

ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮರವಂತೆ ದೇವಾಡಿಗ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಡಿಗ ಸಮುದಾಯ ಸಂಘಟಿತವಾದರೆ ಮಹತ್ಸಾಧನೆ ಮಾಡಬಹುದು ಎನ್ನುವುದಕ್ಕೆ ಬಾರ್ಕೂರಿನಲ್ಲಿ ರೂ. ೯.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕುಲದೇವತೆ ಏಕನಾಥೇಶ್ವರಿ ದೇವಾಲಯವೇ ನಿದರ್ಶನ. ಸಮುದಾಯ ಮಕ್ಕಳ ಶಿಕ್ಷಣಕ್ಕೆ, ಪಾರಂಪರಿಕವಾಗಿ ಬಂದ ಕುಲಕಸುಬಿನ ಆಧುನೀಕರಣಕ್ಕೆ ಒತ್ತು ನೀಡಬೇಕು. ತಳಮಟ್ಟದ ಸಂಘಟನೆಗಳಲ್ಲಿ ಭೇದಭಾವಕ್ಕೆ ಎಡೆಕೊಡದೆ, ಹೊಂದಾಣಿಕೆಯ ಮೂಲಕ ಗುರಿ ಸಾಧಿಸಬೇಕು ಎಂದು ಅವರು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ದೇವಾಡಿಗ ಸಮುದಾಯ ತನ್ನ ಉನ್ನತ ಪರಂಪರೆ ಮತ್ತು ಸಮಾಜಕ್ಕೆ ನೀಡುತ್ತಬಂದ ಕೊಡುಗೆಗಳನ್ನು ಅರಿತುಕೊಂಡು ಅವುಗಳಿಂದ ಸ್ಫೂರ್ತಿಪಡೆಯಬೇಕು ಎಂದರು.

ಸಂಘದ ಅಧ್ಯಕ್ಷ ಗಿರೀಶ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ದುಬೈ ಕದಂ ಸಂಘಟನೆಯ ಗೌರವಾಧ್ಯಕ್ಷ ಮರವಂತೆ ಶೀನ ದೇವಾಡಿಗ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

ಧರ್ಮೇಂದ್ರ ದೇವಾಡಿಗ ಪ್ರಾರ್ಥನೆ ಹಾಡಿದರು. ಗೋಪಾಲ ದೇವಾಡಿಗ ಸ್ವಾಗತಿಸಿದರು. ಸುಬ್ಬಯ್ಯ ದೇವಾಡಿಗ ವಂದಿಸಿದರು. ಜ್ಯೋತಿ ದೇವಾಡಿಗ ನಿರೂಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ, ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ, ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ, ಗುಜ್ಜಾಡಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಉದ್ಯಮಿಗಳಾದ ರಮೇಶ ದೇವಾಡಿಗ, ಶ್ರೀಧರ ದೇವಾಡಿಗ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್, ಗಂಗೊಳ್ಳಿ ಎಸ್‌ಐ ವಾಸಪ್ಪ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದೇವಾಡಿಗ ಬಿಜೂರು, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಂಘದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ ಇದ್ದರು.

ಹಿರಿಯ ವಾದನ ಕಲಾವಿದ ಶೇಷ ದೇವಾಡಿಗ ಹುಟ್ಟಿನಮನೆ ಅವರಿಗೆ ’ವರಾಹಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ದೇವಾಡಿಗ ಕಲಾವಿದರು ಯಕ್ಷಗಾನ ಪ್ರದರ್ಶಿಸಿದರು.

 

Exit mobile version