Kundapra.com ಕುಂದಾಪ್ರ ಡಾಟ್ ಕಾಂ

ಹಿಂದು ಜಾಗರಣ ವೇದಿಕೆ: ಮಾರಣಕಟ್ಟೆಗೆ ಪಾದಯಾತ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರಾಕೃತಿಕ ವಿಕೋಪ ಕಡಿಮೆಯಾಗಲು, ಮತ್ಸ್ಯಸಂಪತ್ತು ಸಮೃದ್ಧಿಯಾಗಲೆಂದು, ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಯಾಗದಿರಲೆಂದು ಹಾಗೂ ಗೋ ಸಂತತಿ ರಕ್ಷಣೆಗಾಗಿ ಮತ್ತು ಸಮಸ್ತ ಹಿಂದು ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಸೋಮವಾರ ಪಾದಯಾತ್ರೆ ನಡೆಸಿದರು.

ಇಂದು ಬೆಳಿಗ್ಗೆ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಪಾದಯಾತ್ರೆ ಕೈಗೊಂಡ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಧ್ಯಾಹ್ನ ಶ್ರೀ ಮಾರಣಕಟ್ಟೆ ತಲುಪಿದರು. ಬಳಿಕ ಶ್ರೀ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಕೈಗೊಂಡ ಉದ್ದೇಶವನ್ನು ಈಡೇರಿಸುವಂತೆ ಶ್ರೀದೇವರಲ್ಲಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರದ ಪ್ರಸಾದವನ್ನು ತಂದು ಪಂಚಗಂಗಾವಳಿ ನದಿಗೆ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುದೇವ ದೇವಾಡಿಗ, ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಯಶವಂತ ಖಾರ್ವಿ, ರಾಘವೇಂದ್ರ ಗಾಣಿಗ, ರತ್ನಾಕರ ಗಾಣಿಗ, ರಾಮಪ್ಪ ಖಾರ್ವಿ, ರಘುನಾಥ ಖಾರ್ವಿ. ನವೀನ ದೊಡ್ಡಹಿತ್ಲು, ಮಹೇಶ ಖಾರ್ವಿ ದಾಕುಹಿತ್ಲು, ಶ್ರೀಧರ ಶೇರುಗಾರ್, ಮಣಿ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬೈರು ಬಸವ ಖಾರ್ವಿ, ಮಂತಿ ಶ್ರೀನಿವಾಸ ಖಾರ್ವಿ, ನಾಗರಾಜ ಖಾರ್ವಿ ಮತ್ತಿತರರ ನೇತೃತ್ವದಲ್ಲಿ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.

Exit mobile version