Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜು: 89ರ ಸಾಲಿನ ಬಿ.ಎಸ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಗುರುನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನ 1989ರ ಸಾಲಿನ ಬಿ.ಎಸ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುನಮನ ಕಾರ್ಯಕ್ರಮವನ್ನು ಕಾಲೇಜಿನ ರಾಧಾ ಬಾ ರಂಗ ಮಂದಿರ (ಕೋಯಾಕುಟ್ಟಿ ಹಾಲ್)ನಲ್ಲಿಆಯೋಜಿಸಲಾಗಿತ್ತು.

30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಂಘಟನೆಗೊಂಡು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮೊದಲಿಗೆ ಗುರುನಮನ ಕಾರ್ಯಕ್ರಮ ನೇರವೇರಿತು. ಅಂದಿನ ಪ್ರಾಂಶುಪಾಲರಾದ ಪ್ರೊ. ಎ. ನಾರಾಯಣ ಆಚಾರ್ಯರಿಗೆ ಮೊದಲು ಗೌರವಿಸಿ, ’ಗುರುವಂದನೆ’ ಸಲ್ಲಿಸಿದರು. ನಂತರ ಭಾಷಾ ವಿಭಾಗಗಳನ್ನು ಒಳಗೊಂಡು ವಿಜ್ಞಾನದ ಸುಮಾರು 19 ಮಂದಿ ಗುರುಗಳಿಗೆ ’ಗುರುನಮನ’ ಸಲ್ಲಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಎ. ನಾರಾಯಣ ಆಚಾರ್ಯ, ವಿಶ್ಯಸ್ಥಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಭಾಗವಹಿಸಿದ್ದರು.

ದುಬೈನ ಫಾರ್ಚೂನ್ ಗ್ರೂಫ್‌ನ ಚೇರ್‌ಮನ್ ಹಾಗೂ ಉದ್ಯಮಿ ಕೆ. ಪ್ರವೀಣ್ ಶೆಟ್ಟಿ ವಕ್ವಾಡಿ, ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಗುರುಪ್ರಸಾದ್ ಉಪಾಧ್ಯ, ಸ.ಪ.ಪೂ ಕಾಲೇಜು, ಕುಂದಾಪುರದ ಉಪನ್ಯಾಸಕ ಕಿಶೋರ ಹಂದೆ, ರೈಲ್ವೆ ಉದ್ಯೋಗಿಗಳ ತರಬೇತುದಾರ ಮಾಧವ ಭಟ್ ಇತರರು ತಮ್ಮ ಸವಿನೆನಪುಗಳನ್ನು ಎ ಎಳೆಯಾಗಿ ಪ್ರಸ್ತುತ ಬಿ.ಎಸ್ಸಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮನೀಶ್ ಆಸ್ಪತ್ರೆಯ ಆಡಳಿತ ನಿರ್ದೇಶಕಿಯಾಗಿರುವ 1989ರ ವರ್ಷದ ಚಿನ್ನದ ಪದಕ ವಿಜೇತೆ ಡಾ. ಪ್ರಮೀಳಾ ನಾಯಕ್‌ರವರಿಗೆ ಮತ್ತೊಮ್ಮೆ ಚಿನ್ನದ ಪದಕವನ್ನು ಪ್ರೊ. ಎ. ನಾರಾಯಣ ಆಚಾರ್ಯರು ತೋಡಿಸಿದರು. ಮುಖ್ಯ ಅತಿಥಿಯಾದ ಪ್ರೊ. ಎ. ನಾರಾಯಣ ಆಚಾರ್ಯರು ಸಹ ತಮ್ಮ ಸವಿನೆನಪನ್ನು ಎಲ್ಲರೊಂದಿಗೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಡಾ. ಎನ್. ಪಿ. ನಾರಾಯಣ ಶೆಟ್ಟಿಯವರು ಇಂತಹ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಿರಂತರವಾಗಿ ನಡೆಯಬೇಕೆಂದು ಆಶಿಸಿದರು.

ಪೂರ್ಣಿಮಾ ಅಡಿಗ ಮತ್ತು ಶ್ರೀಲತಾರವರು ಪ್ರಾರ್ಥಿಸಿದರು. ಭಂಡಾರ್‌ಕಾರ‍್ಸ್ ಕಾಲೇಜಿನ ರಸಾಯನಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಹತ್ವಾರ್ ಸ್ವಾಗತಿಸಿ, ಶ್ರೀ ಗುರುಪ್ರಸಾದ್ ಉಪಾಧ್ಯ ವಂದಿಸಿ, ರೋಶನ್ ಬೇಬಿ ಮತ್ತು ಶ್ರೀಮತಿ ವಿದ್ಯಾ ಪಿ ರವರು ನಿರೂಪಿಸಿದರು. ಪೂರ್ಣಿಮಾ ಅಡಿಗರ ಭೋಜನಾ ವ್ಯವಸ್ಥೆಯ ನಿರ್ವಹಣೆ ಎಲ್ಲರನ್ನೂ ಆಕರ್ಷಿಸಿತು.

Exit mobile version