Site icon Kundapra.com ಕುಂದಾಪ್ರ ಡಾಟ್ ಕಾಂ

ಮಟ್ಕಾ ಹಾವಳಿ ಸಂಪೂರ್ಣ ತಡೆಯಿರಿ: ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ತಾಕೀತು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಬೈಂದೂರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು  ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ವಹಿಸಿದ್ದರು.

ಈ ಸಂದರ್ಭ ಅವರು ಮಾತನಾಡಿ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮಟ್ಕಾ ಹಾವಳಿ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು, ಅವುಗಳು ಸಂಪೂರ್ಣ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಗೆ ಸೂಚಿಸಿದರು. ಒಂದು ವಾರದೊಳಗೆ ಮರಳು ಸಮಸ್ಯೆ ಬಗೆಹರಿಯಲಿದ್ದು, ೧೫೮ ಜನರಿಗೆ ಪರವಾನಗಿ ನೀಡಲಾಗುತ್ತದೆ, ಜಿಲ್ಲೆಯ ಮರಳು ಅನ್ಯ ಜಿಲ್ಲೆಗೆ ಕಳುಹಿಸದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗುವುದು ಎಂದರು.

ಬೈಂದೂರು ತಾಲೂಕಿನಲ್ಲಿ ಪ್ರಸ್ತುತ 16 ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ 14 ಇಲಾಖೆಗಳು ಶೀಘ್ರ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಇಲಾಖೆ ಕಾರ್ಯನಿರ್ವಹಿಸಲು ಕಟ್ಟಡಗಳ ಸಮಸ್ಯೆ ಕಂಡುಬಂದರೆ ಸದ್ಯ ಬಾಡಿಗೆ ಕಟ್ಟಡದಲ್ಲಾದರೂ ಕಾರ್ಯಹಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಕೊಲ್ಲೂರು ಹಾಗೂ ಬೈಂದೂರಿನಲ್ಲಿ ಪೋಲೀಸ್ ವಸತಿಗೃಹ ನಿರ್ಮಾಣಕ್ಕೆ ಸಮರ್ಪಕ ಜಾಗವಿದ್ದು, ವಸತಿಗೃಹ ನಿರ್ಮಾಣ ಸಂಬಂಸಿದಂತೆ, ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು.

ನೂತನ ತಾಲೂಕಿಗೆ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತಿಸಿದ್ದು, ಶೀಘ್ರದಲ್ಲಿ ನ್ಯಾಯಾಲಯ ಸ್ಥಾಪನೆಯಾಗಲಿದೆ. ಈಗಿರುವ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ರಾಜ್ಯ ಸಿಎಸ್‌ಗೆ ವರದಿ ತರಿಸಿಕೊಳ್ಳುವಂತೆ ತಿಳಿಸಿದ್ದಾರೆ. ಇನ್ನು ಉಳಿದಂತೆ ಮುಂದಿನ ಕೆಲವೇ ತಿಂಗಳಲ್ಲಿ ಬೈಂದೂರು ಪುರಸಭೆಯಾಗಿ ಕಾರ್ಯನಿರ್ವಹಿಸಲಿದೆ. ಕೃಷಿ ಹಾಗೂ ಪಶು ಇಲಾಖೆಗಳಿಗೆ ಸಂಬಂಧಿಸಿದ ದೂರಿನನ್ವಯ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ತಹಶೀಲ್ದಾರ ಬಸಪ್ಪ ಪೂಜಾರ್, ಬೈಂದೂರು ತಾಲೂಕು ಕಾರ್ಯನಿರ್ವಹಣಾಕಾರಿ ಭಾರತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Exit mobile version