ಬೈಂದೂರು: ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮೃತ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮನೆಗೆ ಭೇಟಿ ನೀಡಿ ಆಕೆಯ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಕ್ಷತಾ ಮೃತಪಟ್ಟಿರುವುದು ಅತೀವ ನೋವು ತಂದಿದೆ. ಅಕ್ಷತಾಳ ಸಹೋದರಿಯರ ಶಿಕ್ಷಣಕ್ಕೆ ಸರಕಾರದಿಂದಾದ ನೆರವನ್ನು ನೀಡುವುದಾಗಿ ಭರವಸೆ ಇತ್ತರು.
ಊರಿನ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆ ಜೋಡಣೆ ಅಕೇಶಿಯಾ ಪ್ಲಾಂಟೆಶನ್ ತೆರವು, ಮಕ್ಕಳು ಶಾಲೆಗೆ ತೆರಳಲು ವಾಹನದ ವ್ಯವಸ್ಥೆಯ ಮುಂತಾದವುಗಳ ಕುರಿತು ಗ್ರಾಮಸ್ಥರು ಅಹವಾಲು ತೋಡಿಕೊಂಡಾಗ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಮುಖಂಡರುಗಳಾದ ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

