Kundapra.com ಕುಂದಾಪ್ರ ಡಾಟ್ ಕಾಂ

ಶೈಕ್ಷಣಿಕ ಜಾಗೃತಿಯಿಂದ ಸಮಾಜ ಅಭಿವೃದ್ಧಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ಕಾಲಘಟ್ಟದಲ್ಲಿ ಕೇವಲ ಬುದ್ದಿವಂತನಾದರೆ ಮಾತ್ರ ಸಾಲದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ವಿದ್ಯಾವಂತನಾಗಬೇಕು. ಪ್ರತಿಯೊಬ್ಬರಲ್ಲಿಯೂ ಸಾಮಾಜಿಕ ಪ್ರಜ್ಞೆ, ಪ್ರಾಮಾಣಿಕತೆಯಿದ್ದರೆ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಉಳ್ಳೂರು ಗ್ರಾಮದ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೈಂದೂರು ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಸಮುದಾಯವು ಕಲೆ ಮತ್ತು ನಿರ್ಮಾಣ ಕೌಶಲ್ಯವನ್ನು ಪರಂಪರಾನುಗತವಾಗಿ ರೂಢಿಸಿಕೊಂಡು ಬಂದಿದೆ. ಎಲ್ಲ ವರ್ಗದ ಜನರಿಗೂ ಅನಿವಾರ್ಯವೆನಿಸಿದ ಕಾರಣದಿಂದ ಸಮಾಜದ ಪ್ರಧಾನ ಅಂಗಗಳಲ್ಲಿ ಒಂದಾಗಿರುವ ವಿಶ್ವಕರ್ಮ ಸಮುದಾಯ ಇನ್ನಷ್ಟು ಸಂಘಟಿತವಾಗಿ, ಅಭಿವೃದ್ಧಿ ಸಾಧಿಸಿ, ತನ್ನ ಹಿರಿಮೆ ಮೆರೆಯಬೇಕು ಎಂದ ಶಾಸಕರು, ವಿಶ್ವಕರ್ಮರು ತಮ್ಮ ಕುಲಕಸುಬನ್ನು ಅನುಸರಿಸುತ್ತಿರುವುದು ಒಳ್ಳೆಯದೆ. ಆದರೆ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವಾಗುವುದರಿಂದ ಮಕ್ಕಳ ಶಿಕ್ಷಣವನ್ನು ಕಡೆಗಣಿಸದೆ ಸಮುದಾಯ ಹೊಂದಿರುವ ಸಾಮರ್ಥ್ಯದ ಸಂಪೂರ್ಣ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಯಾವುದೇ ಸಮಾಜ ಶೈಕ್ಷಣಿಕವಾಗಿ ಜಾಗೃತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಸಲಹೆ ನೀಡಿದರು.

ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರಿ ಅವರ ಅಧ್ಯಕ್ಷತೆವಹಿಸಿದ್ದರು. ಶಂಕರಪುರದ ಶಿಲ್ಪಿ ಬಿಳಿಯಾರು ಗಣಪತಿ ಆಚಾರ್ಯ ವಿಶ್ವಕರ್ಮ ಜಯಂತಿಯ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಹೇರೂರು ಗ್ರಾಪಂ ಅಧ್ಯಕ್ಷೆ ಅಕ್ಕಯ್ಯ ಶೆಟ್ಟಿ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ, ಎರಡನೇ ಮೊಕ್ತೇಸರ ನೀರ‍್ಕೆರೆ ಬಾಬು ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಬೈಂದೂರು ವಿಶ್ವಕರ್ಮ ಸಮಾಜ ಸೇವ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

ಕಳವಾಡಿ ಸಂಜೀವ ಆಚಾರ್ಯ ಸ್ವಾಗತಿಸಿ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಳದ ಮೂರನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ ಪ್ರಾಸ್ತಾವಿಸಿದರು. ಕೊಡ್ಲಾಡಿ ಪ್ರಭಾಕರ ಆಚಾರ್ಯ ನಿರೂಪಿಸಿ, ಆಲೂರು ಶ್ರೀಧರ ಆಚಾರ್ಯ ವಂದಿಸಿದರು.

Exit mobile version