Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೀಡೆಗಳಲ್ಲಿ ಸೋಲು ಗೆಲುವು ಸಮಾನ್ಯ. ಆದರೆ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ನಿರಂತರವಾಗಿ ಮುನ್ನುಗ್ಗುವ ಛಲವನ್ನು ಆಳವಡಿಸಿಕೊಂಡಾಗ ಜೀವನದಲ್ಲಿ ಸತತ ಯಶಸ್ಸು ಪಡೆಯಲು ಸಾಧ್ಯ ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಷನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಭಾ ಕಾರ‍್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಎಲ್ಲಾ ಕ್ರೀಡೆಗಳನ್ನು ಸಮಾನ ದೃಷ್ಟಿಯಿಂದ ನೋಡುವ ಪ್ರೋತ್ಸಾಹಿಸುವ ಮನೋಭಾವ ನಮ್ಮದಾಗಬೇಕು ಎಂದು ಹೇಳಿದರು.

ಬೈಂದೂರು ತಾಲೂಕಿನ ಕ್ರೀಡಾ ಸಂಯೋಜನಾಧಿಕಾರಿ ಜೀವನ್‌ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಉಪಸ್ಥಿತರಿದ್ದರು. ಸರಸ್ವತಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ ಎ ಅಧ್ಯಕ್ಷತೆ ವಹಿಸಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕ ಭಾಸ್ಕರ ಶೆಟ್ಟಿ ವಂದಿಸಿದರು.

Exit mobile version