Kundapra.com ಕುಂದಾಪ್ರ ಡಾಟ್ ಕಾಂ

ಪತ್ರಕರ್ತರಿಗೆ ಕಾನೂನಿನ ತಿಳುವಳಿಕೆ ಅಗತ್ಯ: ಸುಧೀರ್‌ಕುಮಾರ್ ಮುರೋಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಭಾರತದಲ್ಲಿ ಆರಾಧಿಸಬಹುದಾದ ಶ್ರೇಷ್ಠ ಗ್ರಂಥ ಸಂವಿಧಾನ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಅಡಿಪಾಯ ಎಂದು ಖ್ಯಾತ ವಕೀಲರು ಹಾಗೂ ವಾಗ್ಮಿ ಸುಧೀರ್‌ಕುಮಾರ್ ಮುರೋಳಿ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ಮಾಧ್ಯಮ ಮತ್ತು ಕಾನೂನು ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಪತ್ರಕರ್ತರು ಯಾವಾಗಲೂ ಮಾಧ್ಯಮ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ತಿಳಿದುಕೊಂಡಿರಬೇಕು. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಸುದ್ದಿಗಳ ನೈಜತೆಯನ್ನು ಅರಿತು ಪ್ರಸಾರ ಮಾಡಬೇಕು. ಕೆಲವೊಮ್ಮೆ ಸುದ್ದಿಗಳನ್ನು ಕೊಡುವುದರಿಂದ ಆಗುವ ಅಪಾರ್ಥಕ್ಕೆ ಇಡೀ ಸಮಾಜ ಬೆಲೆ ತೆರಬೇಕಾಗುತ್ತದೆ. ಏಕಾಧಿಪತ್ಯದಲ್ಲಿ ಜನರಿಗೆ ಪ್ರಶ್ನಿಸುವಂತಹ ಅವಕಾಶಗಳಿರುವುದಿಲ್ಲ. ನಮ್ಮಲ್ಲಿನ ಅಂತರಂಗದ ಸಿದ್ಧಾಂತಗಳು ಬದಲಾಗಬೇಕಿದೆ ಎಂದರು.

ಅನುವಾದಕರಾದವರು ಪ್ರತಿಯೊಂದು ವಿಷಯವನ್ನು ಅರಿತು ಅನುವಾದಿಸಬೇಕು. ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಜಪಾನ್‌ನ ವಿರುದ್ದ ದೇಶಗಳು ಜಪಾನ್ ಯುದ್ದ ಮಾಡುತ್ತದೋ ಅಥವಾ ಶರಣಾಗುತ್ತದೋ ಎಂದು ಕೇಳಿದಾಗ ಜಪಾನ್ ಪರಿಶೀಲಿಸುತ್ತೇವೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದರೂ ಒಬ್ಬ ಪತ್ರಕರ್ತ ಮಾಡಿದ ತಪ್ಪು ಅನುವಾದದಿಂದ ಹಿರೋಶಿಮಾ ನಾಗಸಾಕಿ ಮೇಲೆ ಬಾಂಬ್ ದಾಳಿಯಾಯಿತು. ಜಪಾನ್‌ನ ಮೊಕುಸಾಟ್ಸು ಎಂಬ ಪದಕ್ಕೆ ಪರಿಶೀಲಿಸುತ್ತೇನೆ ಹಾಗೂ ನಿರ್ಲಕ್ಷಿಸುತ್ತನೆ ಎಂಬ ಅರ್ಥವಿದೆ. ಈ ಪದವನ್ನು ಪರ್ತಕರ್ತ ಅನುವಾದಿಸುವಾಗ ಮಾಡಿದ ಯಡವಟ್ಟಿನಿಂದ ಇಂದಿನವರೆಗೂ ಆ ಪ್ರದೇಶದಲ್ಲಿ ಯಾತನೆ ಅನುಭವಿಸುವ ಸ್ಥಿತಿ ಒದಗಿ ಬಂದಿದೆ. ಈ ಕಾರಣದಿಂದ ಪತ್ರಕರ್ತನಿಗೆ ವಿಷಯದ ಕುರಿತ ಸರಿಯಾದ ತಿಳುವಳಿಕೆ ಹಾಗೂ ಪದಗಳ ಬಳಕೆಯ ಪರಿಜ್ಞಾನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ. ಶ್ರೀನಿವಾಸ ಪೆಜತಾಯ, ಪದವಿ ವಿಭಾಗ ಮುಖ್ಯಸ್ಥೆ ರೇಷ್ಮಾ ಉಪಸ್ಥಿತರಿದ್ದರು. ದಿಶಾ ಭಟ್ ಸ್ವಾಗತಿಸಿ, ಶ್ರೀಲಕ್ಷ್ಮಿ ಘಾಟೆ ವಂದಿಸಿ, ಆಶ್ರಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version