Site icon Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮ ಮಟ್ಟದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ತ್ರಾಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಮ ಪಂಚಾಯತ್ ತ್ರಾಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ಇವರ ಸಂಯುಕ್ತ ಆಶ್ರಯದಲ್ಲಿ ತ್ರಾಸಿ ಗ್ರಾಮ ಮಟ್ಟದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ತ್ರಾಸಿ ಅಂಬೇಡ್ಕರ್ ಸಭಾ ಭವನದಲ್ಲಿ ಶುಕ್ರವಾರ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ನಮ್ಮ ಹಿಂದಿನ ಸಾಂಪ್ರದಾಯಿಕ ಅಡುಗೆ ಪದ್ಧತಿಯಿಂದ ನಾವೆಲ್ಲರೂ ಹಿಂದೆ ಸರಿಯುತ್ತಿದ್ದೇವೆ. ಇಂದಿನ ದಿನಗಳಲ್ಲಿ ಕೃತಕ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಅನೇಕ ರೀತಿಯ ಸಮಸ್ಯೆಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ನಮ್ಮ ಪೂರ್ವಜರು ಅಳವಡಿಸಿಕೊಂಡು ಬಂದಿರುವ ಅಹಾರ ಪದ್ಧತಿಯ ಬಳಕೆಗೆ ಎಲ್ಲರೂ ಮುಂದಾಗಬೇಕು. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗರ್ಭಿಣಿಯರಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಹುಟ್ಟುವ ಮಕ್ಕಳಲ್ಲಿ ನ್ಯೂನತೆ ಕಂಡು ಬರುತ್ತದೆ. ಹೀಗಾಗಿ ಗರ್ಭಿಣಿಯರು ಸದಾ ಪೌಷ್ಠಿಕ ಆಹಾರ ಸೇವಿಸುತ್ತಿರಬೇಕು. ಎಲ್ಲರೂ ಪೌಷ್ಠಿಕಾಂಶದ ಆಹಾರವನ್ನು ಸೇವಿಸುವುದನ್ನು ರೂಢಿಮಾಡಿಕೊಳ್ಳಬೇಕು ಎಂದು ಹೇಳಿದರು.

ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ತಾಪಂ ಸದಸ್ಯ ರಾಜು ದೇವಾಡಿಗ, ಗ್ರಾಪಂ ಉಪಾಧ್ಯಕ್ಷೆ ಸುಧಾ ಖಾರ್ವಿ, ಸದಸ್ಯರಾದ ವಿಜಯ ಪೂಜಾರಿ, ವೆಂಕಟ ಪೂಜಾರಿ, ಜಿಪಂ ಮಾಜಿ ಸದಸ್ಯೆ ಶಾರದಾ ಡಿ.ಬಿಜೂರು, ಮೊವಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶೇಖರ ಗಾಣಿಗ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್. ಸ್ವಾಗತಿಸಿದರು. ಆರೋಗ್ಯ ಕಾರ್ಯಕರ್ತೆ ಅನಿಸ್ಕರಿಯಾ ಮತ್ತು ಅಂಗನವಾಡಿ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಶೋಭಾ ವಂದಿಸಿದರು.

Exit mobile version