Kundapra.com ಕುಂದಾಪ್ರ ಡಾಟ್ ಕಾಂ

ದಾಸ್ತಾನು ಮರಳು ಶೀಘ್ರ ವಿತರಿಸಲು ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸೂಚಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ನೆರೆ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ, ಜಿಲ್ಲಾ ಪಂಚಾಯತ್ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿಗಳು ದುರಸ್ತಿ ಕಾರ್ಯಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಕುರಿತು ಜಿಲ್ಲಾಧಿಕರಿಗಳಿಗೆ ಪ್ರಸ್ತಾವನೆ ನೀಡುವಂತೆ ಸೂಚಿಸಿ, ಪಿ.ಡಬ್ಲ್ಯುಡಿ ರಸ್ತೆಗಳಲ್ಲಿ ಸಹ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಪಿ.ಡಬ್ಲ್ಯುಡಿ ಇಲಾಖೆಗೆ ಈಗಾಗಲೇ ೧೦.೮೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮರಳು ಸಮಸ್ಯೆಗೆ ಸಂಬಂದಿಸಿದಂತೆ, ಕೋಡಿ ಯಲ್ಲಿ ದಾಸ್ತಾನು ಮಾಡಿರುವ ಮರಳನ್ನು ಶೀಘ್ರದಲ್ಲಿ ವಿತರಿಸುವ ಕುರಿತು ಸಂಬಂದಪಟ್ಟ ಅಧಿಕಾರಿಗಳು ೨ ದಿನಗಳಲ್ಲಿ ಸ್ಥಳವನ್ನು ಪರಿಶೀಲಿಸಿ , ವರದಿ ನೀಡಿ , ಮರಳು ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮಹೇಶ್ವರ ರಾವ್, ಕಾರ್ಕಳದಲ್ಲಿನ ನಾನ್ ಸಿಆರ್‌ಝಡ್ ವ್ಯಾಪ್ತಿಯ ಮರಳು ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಿ ಸಂಬಂದಪಟ್ಟ ಇಲಾಖೆಗಳಿಗೆ ವಿತರಿಸುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿಗಳು , ವಿಕೋಪದಿಂದ ಸಂಪೂರ್ಣ ಹಾನಿಯಾದ ಮನೆಗಳ ಜಿ.ಪಿಎಸ್ ಮಾಡಿಸಿ, ರಾಜೀವ್ ಗಾಂಧೀ ವಸತಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದರು.

ಉಡುಪಿಯಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ ಕುರಿತಂತೆ, ಸುರಕ್ಷಿತ ಸೈಕಲ್ ಸ್ನೇಹಿ ಝೋನ್ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾಧಿಕರಿಗಳು, ಎಸ್ಪಿ , ಆರ್.ಟಿ.ಓ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ , ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಜಿಲ್ಲೆಯಲ್ಲಿ ಸಮುದಾಯ ನೀರಾವರಿ ಯೋಜನೆಯ ಅನುಷ್ಠಾನ ಕುರಿತಂತೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು,ಪಿಎಂ ಕಿಸಾನ್ ಯೋಜನೆಯಲ್ಲಿ ರೈತರ ನೊಂದಣಿ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗಿನ ವಾಡಿಕೆ ಮಳೆ ೪೧೪೦ ಮಿಮೀ ಆಗಿದ್ದು, ೪೪೨೬ ಮಿ.ಮೀ ಮಳೆ ಆಗಿದೆ, ಪ್ರಾಕೃತಿಕ ವಿಕೋಪದಡಿ ಒಟ್ಟು ೬ ಮಾನವ ಜೀವಹಾನಿ , ಮನೆ ಹಾನಿ, ಬೆಳೆ ಹಾನಿ ಸೇರಿದಂತೆ ಒಟ್ಟು ೧೩೬೭ ಪ್ರಕರಣಗಳಲ್ಲಿ ೨,೪೩,೩೧,೫೩೪ ರೂ ಅಂದಾಜು ನಷ್ಠ ಸಂಭವಿಸಿದ್ದು, ೧೩೪೩ ಪ್ರಕರಣಗಳಿಗೆ ಪರಿಹಾರವಾಗಿ ೧,೬೩,೩೨,೦೫೦ ರೂ ಪರಿಹಾರ ವಿತರಿಸಲಾಗಿದೆ. ರಸ್ತೆ , ಸೇತುವೆ ಮತ್ತು ಕಟ್ಟಡಗಳಿಗೆ ಅಂದಾಜು ೬೪೨೩೫.೮೯ ಲಕ್ಷ ನಷ್ಠ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್, ಎಸ್ಪಿ ನಿಶಾ ಜೇಮ್ಸ್, ಡಿಎಫ್‌ಓ ಕಮಲ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version