ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಂಬದಕೋಣೆ ಗ್ರಾಮದ ಎಡಮಾವಿನಹೊಳೆ ಬೊಬ್ಬರ್ಯಗುಂಡಿ ಹೊಳೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ದಾರುಣ ಘಟನೆ ನಡೆದಿದೆ. ಕಂಬದಕೋಣೆಯ ದೊಡ್ಮನೆ ಹಳಗೇರಿ ನಿವಾಸಿ ವೆಂಕಪ್ಪ ಶೆಟ್ಟಿ ಅವರ ಪುತ್ರ ವಂಶಿತ್ ಶೆಟ್ಟಿ (12) ಹಾಗೂ ಹಳಗೇರಿ ಪಟೇಲರಮನೆ ನಿವಾಸಿ ರತ್ನಾಕರ ಶೆಟ್ಟಿ ಅವರ ಪುತ್ರ ರಿತೇಶ್ ಶೆಟ್ಟಿ (12) ನೀರುಪಾಲದ ದುರ್ದೈವಿ ಬಾಲಕರು.
ಕಂಬದಕೋಣೆ ಸಂದೀಪನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ೭ ತರಗತಿ ಕಲಿಯುತ್ತಿರುವ ಈರ್ವರು ಶಾಲೆಗೆ ರಜೆ ಇದ್ದ ಕಾರಣ ಆಟವಾಡಲು ಗೆಳೆಯರೊಂದಿಗೆ ತೆರಳಿದ್ದರು. ಈ ವೇಳೆ ಕಾಲು ತೊಳೆಯಲು ಹೊಳೆಯ ನೀರಿಗಿಳಿದ ಓರ್ವನ ಕಾಲು ಜಾರಿ ನದಿಯಲ್ಲಿ ಮುಳುಗಿದ್ದು, ಇದೇ ಸಂದರ್ಭ ಆತನ ರಕ್ಷಣೆಗೆ ಬಂದ ಇನ್ನೊರ್ವನೂ ಮುಳುಗಿದ್ದಾನೆ. ಸಂಜೆಯ ತನಕ ಶೋಧಕಾರ್ಯ ನಡೆಸಿ ವಂಶಿಕ್ ಶೆಟ್ಟಿಯ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ನಾಪತ್ತೆಯಾಗಿರುವ ಇನ್ನೊರ್ವನಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಸ್ಥಳಕ್ಕೆ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಆಗಮಿಸಿ ಘಟನೆಯ ಬಗೆಗೆ ಮಾಹಿತಿ ಪಡೆದುಕೊಂಡರು. ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂಧಿಗಳು, ಕುಂದಾಪುರ ಅಗ್ನಿ ಶಾಮಕ ಠಾಣೆಯ ಮುಳುಗು ತಜ್ಞರು ಸ್ಥಳೀಯರ ಸಹಕಾರದಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ.