ಕುಂದಾಪ್ರ ಡಾಟ್ ಕಾಂ ವರದಿ.
ಉಡುಪಿ: ಯುವಕರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಾಗ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಮುಖಿಯಾಗಿ ಬದುಕುತ್ತಾರೆ. ಅಂತಹ ದೇಶ ಕಟ್ಟುವ ರಚನಾತ್ಮಕ ಕಾರ್ಯಗಳಲ್ಲಿ ಆಸಕ್ತರಾಗಿರುವ ಯುವ ಸಮೂಹವನ್ನು ಗುರುತಿಸಿ, ಒಗ್ಗೂಡಿಸಿ, ಅವರಿಗೆ ತರಬೇತಿ ನೀಡಿ ಸಮುದಾಯವನ್ನು ಜಾಗೃತವಾಗಿಸುವ ಬಹುದೊಡ್ಡ ಕಾರ್ಯದಲ್ಲಿ ನೆಹರು ಯುವ ಕೇಂದ್ರ ನಿರತವಾಗಿದೆ.
ಇದಕ್ಕೆ ಪೂರಕವಾಗಿ ಉಡುಪಿ ಬ್ರಹ್ಮಗಿರಿಯಲ್ಲಿರುವ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಎಸ್.ಹೆಚ್.ಜಿ ತರಬೇತಿ ಸಂಸ್ಥೆ – ಪ್ರಗತಿ ಸೌಧದಲ್ಲಿ ಉಡುಪಿ ನೆಹರು ಯುವ ಕೇಂದ್ರದ ಸಾರಥ್ಯದಲ್ಲಿ ಅ.10 ಗುರುವಾರದಿಂದ ಆರಂಭಗೊಂಡಿರುವ 15 ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿ (National Youth Volunteer Induction Training) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಯುವ ಶಿಬಿರಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ಈವರೆಗೆ ಹತ್ತು ಹಲವು ವಿಚಾರಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಯುವ ಸಂಘಗಳ ಭೇಟಿ, ಅಧ್ಯಯನ ಪ್ರವಾಸ, ಪ್ರವಾಸಿ ತಾಣಗಳ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ.
ತರಬೇತಿಯ ಒಟ್ಟಾರೆ ಉದ್ದೇಶ ಹಾಗೂ ಅದರಲ್ಲಿ ಪಾಲ್ಗೊಳ್ಳುತ್ತಿರುವ 7 ಜಿಲ್ಲೆಗಳ ಯುವ ಸ್ವಯಂಸೇವಕರುಗಳ ಆಸಕ್ತಿ ಗಮನಿಸಿದರೆ, ಈ ತರಬೇತಿಯು ಪ್ರತಿಯೊಬ್ಬ ಯುವ ಸ್ವಯಂಸೇವಕರ ಭವಿಷ್ಯದ ಯಶಸ್ಸಿಗೆ ಭದ್ರ ಭುನಾದಿ ಹಾಕಿಕೊಡಲಿದೆ ಎಂಬ ಅಭಿಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ. ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಳ್ಳುವ ದಿನಚರಿ ರಾತ್ರಿ 10 ಗಂಟೆಯ ತನಕವೂ ನಿರಂತರವಾಗಿ ನಡೆಯುತ್ತಿದ್ದು, ಬೆಳಗಿನ ಪ್ರಾರ್ಥನೆ, ಯೋಗ, ದೈನಂದಿನ ಚಟುವಟಿಕೆಗಳ ಅವಲೋಕನ, ಎರಡು ಪ್ರತ್ಯೇಕ ತರಗತಿಗಳಲ್ಲಿ ಶಿಬಿರಾರ್ಥಿಗಳಿಗೆ ಉಪನ್ಯಾಸ, ತರಬೇತಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಎರಡೂ ಬ್ಯಾಚ್‌ಗಳಿಗೆ ಒಟ್ಟು 8 ತರಗತಿಗಳು ನಡೆಯುತ್ತಿವೆ.
ತರಬೇತಿ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಪರಿಚಯ, ವಾರ್ಷಿಕ ಕಾರ್ಯಕ್ರಮಗಳ ಮುನ್ನೋಟ, ಯುವ ಸಮುದಾಯದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮಾಹಿತಿ, ಯುವ ಮಂಡಲಗಳ ರಚನೆ, ನಿರ್ವಹಣೆಯ ಹಾಗೂ ಮಾಡಬಹುದಾದ ಕಾರ್ಯಕ್ರಮಗಳು, ಭಾರತ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಸ್ವ-ಉದ್ಯೋಗ ಮುಂತಾದವುಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ.
ವಿವಿಧ ಕ್ಷೇತ್ರಗಳ ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ಧನಾತ್ಮಕ ಚಿಂತನೆ – ಪ್ರೇರಣೆ, ವ್ಯಕ್ತಿಗತ ಸಂಬಂಧ ಕೌಶಲಗಳು, ಭ್ರಷ್ಟಾಚಾರ ಹಾಗೂ ಅದರ ನಿರ್ಮೂಲನೆಗೆ ಯುವಕರು ಕೈಗೊಳ್ಳಬಹುದಾದ ಮಾರ್ಗೋಪಾಯಗಳು, ಆರ್‌ಟಿಐ, ಸ್ವಯಂ ಜಾಗೃತಿ, ಪರಿಣಾಮಕಾರಿ ಸಂವಹನ ಕೌಶಲ್ಯ, ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರ ನಿರ್ಮಾಣ, ಭಾರತೀಯ ಸಂವಿಧಾನ, ಸಾಮಾಜಿಕ ಸಾಮರಸ್ಯ, ಜಲಶಕ್ತಿ ಅಭಿಯಾನ ಹಾಗೂ ಜಲ ಸಾಕ್ಷರತೆ, ಸಾಮಾಜಿಕ ಜಾಗೃತಿ, ಮಾದಕ ವ್ಯಸನದ ದುಷ್ಪರಿಣಾಮ ಹಾಗೂ ನಿರ್ಮೂಲನೆಯಲ್ಲಿ ಯುವಕರ ಪಾತ್ರ, ಪರಿಣಾಮಕಾರಿ ಸಾರ್ವಜನಿಕ ಮಾತುಗಾರಿಕೆ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ, ಗ್ರಾಮಗಳ ಅಭಿವೃದ್ಧಿಯಲ್ಲಿ ಯುವಕರ ಪಾತ್ರ, ಲಿಂಗ ಸಮಾನತೆ, ಕಾರ್ಯಕ್ರಮ ನಿರ್ವಹಣೆ, ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಯುವಜನತೆ, ಭಾವನೆಗಳು ಹಾಗೂ ಯೋಚಿಸುವ ಹಾಗೂ ವಿಶ್ಲೇಷಣೆಯ ಕೌಶಲ್ಯ, ವಿಪತ್ತು ನಿರ್ವಹಣೆ, ಸಮುದಾಯವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸಜ್ಜುಗೊಳಿಸುವುದು, ಶಿಕ್ಷಣ ಹಾಗೂ ಉದ್ಯೋಗೀಕರಣ ಮುಂತಾದ ವಿಷಯವಾಗಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಅಧ್ಯಯನ ಪ್ರವಾಸವಾಗಿ ಸಾಣೂರು ಗ್ರಾಮ ಪಂಚಾಯತ್, ನಿಟ್ಟೆ ಗ್ರಾಮ ಪಂಚಾಯತ್ ನೇಜಾರು ಗ್ರಾಮ ಪಂಚಾಯತ್‌ಗೆ ಭೇಟಿ ಹಾಗೂ ಅಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ, ನಿಟ್ಟೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಭೇಟಿ ನೀಡಿ ಘನ, ದ್ರವ ತ್ಯಾಜ್ಯ ನಿರ್ವಹಣೆಯ ವೀಕ್ಷಣೆ, ವಿಯ್ಯಾರು ಸಿ. ಇ. ಕಾಮತ್ ಕುಶಲ ಕರ್ಮಿಗಳ ತರಬೇತಿ ಸಂಸ್ಥೆಗೆ ಭೇಟಿ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಜಿಲ್ಲೆಯ ವಿವಿಧ ಯುವ ಸಂಘಗಳಾದ ಸಾಣೂರು ಯುವಕ ಮಂಡಲ, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ಚೈತನ್ಯ ಯುವಕ ಮಂಡಲ ಕಲ್ಯ, ಶ್ರೀ ಮಹಾವಿಷ್ಣು ಯುವಕ ಮಂಡಲ ರಿ. ಹರೆಗೋಡು, ಮಹಿಳಾ ಮಂಡಲ ಕೊಲ್ಲೂರು, ಕರಾವಳಿ ಯುವಕ ವೃಂದ ಹೆಜಮಾಡಿಗೆ ಈಗಾಗಲೇ ಭೇಟಿ ನೀಡಲಾಗಿದ್ದು, ಶ್ರೀ ಗುರು ಯುವಕ ಮಂಡಲ ನೇಜಾರು, ಮಹಾವಿಷ್ಣು ಯುವಕ ಮಂಡಲ ಕಟ್‌ಬೆಲ್ತೂರು, ಕುಂದಾಪುರ ತಾಲೂಕಿನ ಎಫ್‌ಎಸ್‌ಎಲ್ ಇಂಡಿಯಾ ಮುಂತಾದೆಡೆ ಭೇಟಿ ನೀಡಿ ಅಲ್ಲಿನ ಯುವಕರುಗಳ ಜೊತೆ ಸಂವಾದ ನಡೆಸಲಾಗುತ್ತದೆ.
ಈ ನಡುವೆ ಕಾರ್ಕಳ ಗೊಮ್ಮಟ ಬೆಟ್ಟ, ಮೂಡುಬಿದಿರೆ ಸಾವಿರ ಕಂಬದ ಬಸದಿ, ಅತ್ತೂರು ಚರ್ಚ್, ಉಡುಪಿ ಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಹೆಜಮಾಡಿ ಬೀಚ್, ಮಲ್ಪೆ ಬೀಚ್, ಸೀ ವಾಕ್ ಮುಂತಾದ ಪ್ರವಾಸಿ ತಾಣಗಳಿಗೆ ಶಿಬಿರಾರ್ಥಿಗಳನ್ನು ಕರೆದೊಯ್ದು ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಯಿತು.
ನೆಹರು ಯುವ ಕೇಂದ್ರದ ಉದ್ದೇಶಗಳಲ್ಲಿ ಮುಖ್ಯವಾಗಿ ರಾಷ್ಟ್ರೀಯ ಯುವ ಕಾರ್ಯಕರ್ತರನ್ನು ಪರಿಪೂರ್ಣ ಯುವ ನಾಯಕರನ್ನಾಗಿ ರೂಪಿಸುವುದು ಮತ್ತು ಆ ಮೂಲಕ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ, ಅನುಷ್ಠಾನ ಮಾಡುವಲ್ಲಿ ಮುತುವರ್ಜಿ ವಹಿಸುವುದು ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳು ಯುವ ಸಂಘಗಳ ಮುಖೇನ ಯುವ ಸಮುದಾಯ ಹಾಗೂ ಸಮಾಜಕ್ಕೆ ತಲುಪಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವುದಾಗಿದ್ದು, ಅದರ ಸಾಕಾರಕ್ಕೆ ಪೂರಕವಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ. ನೆಹರು ಯುವ ಕೇಂದ್ರ ಸಮುದಾಯದ ಯುವಜನರನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಅವರಲ್ಲಿನ ಸೇವಾ ಮನೋಭಾವವನ್ನು ಪ್ರೇರೇಪಿಸಿ ರಾಷ್ಟ್ರಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡುವಲ್ಲಿ ಶ್ರಮಿಸುತ್ತಿದೆ.
ಭಾರತ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಹರು ಯುವ ಕೇಂದ್ರ ಸಂಘಟನೆ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಉಡುಪಿ ಆಯೋಜಿಸಿರುವ 15 ದಿನಗಳ ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿ ಊಟ ವಸತಿಯೊಂದಿಗೆ ನಡೆಯುತ್ತಿದ್ದು, ಕಾರ್ಯಕ್ರಮದ ಜವಾಬ್ದಾರಿಯನ್ನು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಅತುಲ್ ನಿಕಮ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ವಹಿಸಿಕೊಂಡಿದ್ದು, ಅವರಿಗೆ ಲೆಕ್ಕಾಧಿಕಾರಿ ವಿಷ್ಣುಮೂರ್ತಿ ಸೇರಿದಂತೆ ಜಿಲ್ಲಾ ಯುವ ಸ್ವಯಂಸೇವಕರುಗಳು ಜೊತೆಯಾಗಿದ್ದಾರೆ.
ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಯುವ ಸ್ವಯಂಸೇವಕರುಗಳಿಗೆ ಪ್ರಶಸ್ತಿ ಪತ್ರ, ಜಿಲ್ಲೆಯ ಯುವಕ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿ ವಿತರಣಾ ಸಮಾರಂಭ ನಡೆಯಲಿದೆ. ತರಬೇತಿಯ ಪೂರ್ಣಗೊಂಡ ಬಳಿಕ ಯುವ ಸ್ವಯಂಸೇವಕರುಗಳು ತಮ್ಮ ತಮ್ಮ ತಾಲೂಕುಗಳ ವ್ಯಾಪ್ತಿಯಲ್ಲಿ ನೆಹರು ಯುವ ಕೇಂದ್ರದ ಪ್ರತಿನಿಧಿಗಳಾಗಿ ಸಮುದಾಯದ ಜಾಗೃತಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ.
ವರದಿ: ಸುನಿಲ್ ಹೆಚ್. ಜಿ., ಬೈಂದೂರು