Kundapra.com ಕುಂದಾಪ್ರ ಡಾಟ್ ಕಾಂ

ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಕ್ರ್ರಿಮಿನಲ್ ಮೊಕದ್ದಮೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧಿಸಿದ ಇಲಾಖೆಗೆ ಹಿಂದಿರುಗಿಸುವಂತೆ ಈಗಾಗಲೇ ಬಹಳಷ್ಟು ಬಾರಿ ತಿಳುವಳಿಕೆ ಮತ್ತು ಎಚ್ಚರಿಕೆಗಳನ್ನು ನೀಡಿದರೂ ಸಹ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 665 ಅನರ್ಹ ಕಾರ್ಡುದಾರರು ಮಾತ್ರ ಸ್ವ-ಇಚ್ಛೆಯಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಿದ್ದು, ರದ್ದುಪಡಿಸಲಾಗಿದೆ.

ಸ್ವಂತ ನಾಲ್ಕು ಚಕ್ರದ ವಾಹನ ಹೊಂದಿರುವ 256 ಅನರ್ಹ ಕಾರ್ಡುದಾರರನ್ನು ಸಾರಿಗೆ ಇಲಾಖೆ ಸಹಕಾರದೊಂದಿಗೆ ಪತ್ತೆ ಹಚ್ಚಿ, ರದ್ದುಪಡಿಸಿ ಸದ್ರಿಯವರ ಮೇಲೆ ಕಾನೂನು ಕ್ರಮ ಜಾರಿಗೊಳಿಸಲಾಗುತ್ತಿದೆ.

ಇನ್ನೂ ಬಹಳಷ್ಟು ಅನರ್ಹ ಕಾರ್ಡುದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಅಂತಹ ಅನರ್ಹ ಕಾರ್ಡುದಾರರು ಸ್ವ-ಇಚ್ಛೆಯಿಂದ ಪಡಿತರ ಚೀಟಿಗಳನ್ನು ಇಲಾಖೆಗೆ ಹಿಂದಿರುಗಿಸಲು ಅಕ್ಟೋಬರ್ 31 ರ ವರೆಗೆ ಅವಕಾಶವನ್ನು ನೀಡಲಾಗಿದೆ. ನಂತರದ ದಿನಗಳಲ್ಲಿ ಇಲಾಖೆಯ ಮುಖಾಂತರ ಪತ್ತೆ ಹಚ್ಚಿದಾಗ ಕಂಡು ಬರುವ ಅನರ್ಹ ಪಡಿತರ ಚೀಟಿದಾರರಿಂದ ಅವರು ಪಡೆದಿರುವ ಪಡಿತರ ವಸ್ತುಗಳ ಮೌಲ್ಯವನ್ನು ಮುಕ್ತ ಮಾರುಕಟ್ಟೆ ದರದಲ್ಲಿ ದಂಡವಾಗಿ ವಸೂಲಿ ಮಾಡಲಾಗುವುದು ಮತ್ತು ಕರ್ನಾಟಕ (ಅನಧಿಕೃತ ಪಡಿತರ ಚೀಟಿಗಳ ಹೊಂದುವಿಕೆ ತಡೆ) ಆದೇಶ 1977 ಮತ್ತು ಭಾರತೀಯ ದಂಡ ಸಂಹಿತೆ ಕಲಂ 420 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version