ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಟೋಲ್ ಪ್ಲಾಜಾದ ಆಚೆ ಮತ್ತು ಈಚೆಗೆ ಇರುವ ಕೃಷಿ ಭೂಮಿಗೆ, ಅಕ್ಕಪಕ್ಕದ ಗ್ರಾಮಗಳಿಗೆ ತೆರಳಲು ಟೋಲ್ ನೀಡುವ ಸ್ಥಿತಿ ಇದೆ. ಸಮೀಪದ ಭಟ್ಕಳದ ಹೋಟೆಲುಗಳಿಗೆ ಕುಟುಂಬಿಕರೊಂದಿಗೆ 35ರೂ ಹಾಪ್ ಬಿರಿಯಾನಿ ತಿಂದು ಬರಲು 70ರೂ ಟೋಲ್ ನೀಡಲು ಸಾಧ್ಯವೆ? ಎಲ್ಲಿಯೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ವಿಸ್ ರಸ್ತೆಗಳು ಸಮರ್ಪಕವಾಗಿಲ್ಲ. ಬಸ್ ನಿಲ್ದಾಣ ನಿರ್ಮಾಣಗೊಂಡಿಲ್ಲ. ಆದಾಗ್ಯೂ ಟೋಲ್ ಪ್ಲಾಜಾ ಮಾತ್ರಾ ತ್ವರಿತಗತಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಶಿರೂರು ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬುಧವಾರ ಟೋಲ್ ಚಲೋ ಪ್ರತಿಭಟನಾ ಸಭೆಯಲ್ಲಿ ಕೇಳಿಬಂದ ಮಾತುಗಳು.
ಈ ಸಂದರ್ಭ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಕುಂದಾಪುರ-ಶಿರೂರು ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ. ಅದರೊಂದಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವ ಮುನ್ನವೇ ಶಿರೂರಿನಲ್ಲಿ ವಾಹನ ಶುಲ್ಕ ಸಂಗ್ರಹಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಮೂಡಿದೆ. ಅದು ನಿಜವಾದರೆ ಅದಕ್ಕೆ ತಡೆಯೊಡ್ಡಲಾಗುವುದುನೆಂದು ಎಚ್ಚರಿಕೆ ನೀಡಿದರು.
ಕಾಮಗಾರಿ ನಡೆಯುತ್ತಿದ್ದ ವಿವಿಧ ಹಂತಗಳಲ್ಲಿ ಸಾರ್ವಜನಿಕರೂ, ಜನಪ್ರತಿನಿಧಿಗಳೂ ನೀಡಿದ ಸಲಹೆ, ಎಚ್ಚರಿಕೆಗಳನ್ನು ಗುತ್ತಿಗೆದಾರ ಕಂಪನಿ ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ‍್ಸ್ ನಿರ್ಲಕ್ಷಿಸಿದೆ. ಅದರ ಪರಿಣಾಮವಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಜನರು ತಾಳ್ಮೆ ಕಳೆದುಕೊಳ್ಳುವ ಮೊದಲೇ ಚರಂಡಿ, ಸರ್ವಿಸ್ ರಸ್ತೆ, ಕಡಿದು ಹಾಕಿದ ಸಂಪರ್ಕ ರಸ್ತೆಗಳ ದುರಸ್ತಿ, ಬಸ್ ನಿಲ್ದಾಣ, ಒದಗಿಸಬೇಕು. ಸ್ಥಳೀಯರ ಬೇಡಿಕೆಯಂತೆ ಶಿರೂರು ಟೋಲ್ ಸಂಗ್ರಹ ಕೇಂದ್ರದಿಂದ ೧೦ ಕಿಮೀ ವ್ಯಾಪ್ತಿಯ ವಾಹನ ಸಂಚಾರಿಗಳಿಗೆ ಸುಂಕ ವಿನಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕೆಲಸ ಪೂರ್ಣಗೊಳ್ಳುವ ಮೊದಲೇ ಟೋಲ್ ಆರಂಭಿಸುವುದು ಸರಿಯಾದ ಕ್ರಮವಲ್ಲ. ಮಳೆಗಾಲದಲ್ಲಿ ಚಿಂತಾಜನಕ ಸ್ಥಿತಿ ಎದುರಿಸುವಂತಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ ಮಾತು ಕೊಟ್ಟಂತೆ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಆರಂಭಿಸಿದರೆ ತೀವ್ರ ಸ್ವರೂಪದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಹಾಲಿ ಸದಸ್ಯ ಸುರೇಶ ಬಟವಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ ಶೆಟ್ಟಿ, ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಸ್ಥಳೀಯ ಮುಖಂಡ ಜಿಫ್ರಿ ಸಾಹೇಬ್ ಭಟ್ಕಳದ ಕೃಷ್ಣ ನಾಯ್ಕ್, ಬೆಳ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ ಹೆದ್ದಾರಿ ಕರಾವಳಿ ಗ್ರಾಮಗಳ ಜೀವನಾಡಿ. ಅಸಮರ್ಪಕ ಕಾಮಗಾರಿಯ ಫಲವಾಗಿ ಈ ಭಾಗದಲ್ಲಿ ಹಲವು ವಾಹನ ಅಪಘಾತಗಳು ಸಂಭವಿಸಿವೆ; ಜೀವಹಾನಿ ಆಗಿದೆ. ಅದಕ್ಕೆ ಕಾರನವಾಗುತ್ತಿರುವ ತೊಡಕುಗಳನ್ನು ನಿವಾರಿಸಿದ ಬಳಿಕವೇ ಟೋಲ್ ಸಂಗ್ರಹಿಸಬೇಕು ಮತ್ತು ಬೈಂದೂರಿನಿಂದ ಭಟ್ಕಳದ ವರೆಗಿನ ಸಂಚಾರಿಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಸತೀಶಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಅರುಣಕುಮಾರ ಶಿರೂರು ನಿರೂಪಿಸಿದರು. ಹೆದ್ದಾರಿ ಪ್ರಾಧಿಕಾರದ ಸೈಟ್ ಮ್ಯಾನೇಜರ್ ನವೀನ್ ಅವರಿಗೆ ಬೇಡಿಕೆ ಪತ್ರ ಸಲ್ಲಿಸಲಾಯಿತು. ಇದೇ ವೇಳೆ ಬೈಂದೂರು ತಾಲ್ಲೂಕು ಸಿಐಟಿಯು ಪರವಾಗಿಯೂ ಬೇಡಿಕೆ ಪತ್ರ ಹಸ್ತಾಂತರಿಸಲಾಯಿತು. ವಿವಿಧ ಜನಪ್ರತಿನಿಧಿಗಳು, ಪಕ್ಷಗಳ ಮುಖಂಡರು, ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.