Site icon Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಕರಾವಳಿಯಲ್ಲಿ ಕಡಲ್ಕೊರೆತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಮಳೆಗಾಲದಲ್ಲಿ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಸಂಭವಿಸಿದ್ದ ಕಡಲ್ಕೊರೆತ ಅಲ್ಲಿನ ನಿವಾಸಿಗಳಾದ ಮೀನುಗಾರರನ್ನು ಕಂಗೆಡಿಸಿತ್ತು. ಈಚಿಗಿನ ಗಾಳಿಮಳೆಯಿಂದ ಹೊರಬಂದರಿನ ಉತ್ತರದ ತಡೆಗೋಡೆಯ ಉತ್ತರ ದಿಕ್ಕಿನಲ್ಲಿ ಮತ್ತೆ ನಡೆಯುತ್ತಿರುವ ಕೊರೆತ ಅವರನ್ನು ಚಿಂತೆಗೀಡುಮಾಡಿದೆ.

ಸುಮಾರು ೨೦೦ ಮೀಟರು ಉದ್ದದ ತೀರಪ್ರದೇಶದಲ್ಲಿ ಐದಾರು ಮೀಟರು ಭೂಭಾಗ ಇಷ್ಟರಲ್ಲೇ ಸಮುದ್ರ ಸೇರಿದೆ. ಹತ್ತಾರು ತೆಂಗಿನ ಮರಗಳು ಉರುಳಿವೆ. ಕೆಲವೆಡೆ ಆ ವಸತಿ ಪ್ರದೇಶದ ಸಂಪರ್ಕದ ಕೊಂಡಿಯಾಗಿರುವ ಕರಾವಳಿ ಮಾರ್ಗದ ತನಕವೂ ಕೊರೆತ ಆಗುತ್ತಿದೆ. ಕೊರೆತ ನಿಲ್ಲದೆ ಮುಂದುವರಿದರೆ ರಸ್ತೆ ಹಾಗೂ ಅದರಾಚೆಗಿನ ಮನೆಗಳಿಗೂ ಅಪಾಯ ತಟ್ಟಬಹುದು ಎಂಬ ಭೀತಿ ಆವರಿಸಿದೆ.

ಈ ವರೆಗೆ ಬಂದರಿನ ಒಳಭಾಗದ ಪ್ರದೇಶದ ದಂಡೆ ಕೊರೆಯಲ್ಪಡುತ್ತಿತ್ತು. ಅಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಲ್ಲುಗಳನ್ನು ಪೇರಿಸಿ ಕೊರೆತ ತಡೆಗಟ್ಟುವ ಪ್ರಯತ್ನ ನಡೆಸಿತ್ತು. ಅದನ್ನೂ ಮೀರಿ ಅಲೆಗಳು ದಾಳಿ ನಡೆಸಿ ತೀವ್ರ ಅಪಾಯ ಸೃಷ್ಟಿಸಿದಾಗ ಮೀನುಗಾರರೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮರಳು ತುಂಬಿಸಿದ ಬೃಹತ್ ಚೀಲಗಳನ್ನು ಇರಿಸಿ ರಕ್ಷಣೆ ನಿರ್ಮಿಸಿಕೊಂಡಿದ್ದರು. ಈಗ ಕೊರೆತ ತಡೆಗೋಡೆ ದಾಟಿ ಉತ್ತರಕ್ಕೆ ಸರಿದಿದೆ. ಇಲ್ಲಿಯೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ರಸ್ತೆ, ಮನೆಗಳಿಗೆ ಅಪಾಯ ಸಂಭವಿಸುವುದು ಖಚಿತ ಎಂದು ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ ಖಾರ್ವಿ, ಪ್ರಭಾಕರ ಖಾರ್ವಿ ಹೇಳುತ್ತಾರೆ. ಇಲ್ಲಿನ ಸ್ಥಿತಿಯನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾತ್ಕಾಲಿಕ ಉಪಶಮನ ಫಲ ನೀಡುವುದಿಲ್ಲವಾದ್ದರಿಂದ ಇಡೀ ತೀರದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Exit mobile version