Kundapra.com ಕುಂದಾಪ್ರ ಡಾಟ್ ಕಾಂ

ಅಧಿಕಾರಿಗಳು ಸಭೆಗೆ ಬಾರದಿದ್ದರೆ ಅವರು ಜಿಲ್ಲೆಯಲ್ಲಿ ಇರುವುದೇ ಬೇಡ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಧಿಕಾರಿಗಳು ಸಭೆಗೆ ಬಾರದಿದ್ದರೆ ಅವರು ಉಡುಪಿ ಜಿಲ್ಲೆಯನ್ನೇ ಬಿಟ್ಟುಹೋಗುವುದು ಒಳಿತು. ತಾಲೂಕಿನಲ್ಲಿ ಜನರಿಗೆ ನೂರಾರು ಸಮಸ್ಯೆಗಳಿವೆ. ಪ್ರತಿ ಇಲಾಖೆಯಲ್ಲಿಯೇ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಇದರ ಬಗ್ಗೆ ಸರಿಯಾದ ಮಾಹಿತಿ ನೀಡಲು ಕೆಡಿಪಿ ಸಭೆಗೂ ಅಧಿಕಾರಿಗಳು ಸರಿಯಾಗಿ ಭಾಗವಹಿಸದಿದ್ದರೆ ಅವರ ಬಗ್ಗೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕು ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅವರು ತಾಲೂಕಿನಲ್ಲಾಗುತ್ತಿರುವ ಮರಳು ಸಮಸ್ಯೆಗಳ ಬಗೆಗೆ ಪ್ರಸ್ತಾಪಿಸಿ, ಅದರ ಬಗೆಗೆ ಸ್ಪಷ್ಟನೆ ಕೇಳಲು ಅಧಿಕಾರಿಗಳೇ ಇಲ್ಲದಿರುವುದನ್ನು ಸಭೆಯ ಗಮನಕ್ಕೆ ತಂದ ಸಂದರ್ಭ ಅವರು ಹೀಗೆ ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆಯ ಸಿಬ್ಬಂಧಿಗಳಿಂದ ರೋಗಿಗಳಿಗೆ ಸರಿಯಾದ ಸ್ಪಂದನೆ ಇಲ್ಲದಿರುವುದು, ಆಸ್ಪತ್ರೆ ಸ್ವಚ್ಛತೆ ಕಾಪಾಡದಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಅವರು ಸಭೆಯ ಗಮನಕ್ಕೆ ತಂದಾಗ ಅದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ಅವರು ಆಸ್ಪತ್ರೆಯಲ್ಲಿ ಸಿಬ್ಬಂಧಿಗಳ ಕೊರತೆ ಇದ್ದು ಇದರ ನಡುವೆಯೂ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂಧಿ ನೀಡುವ ಬಗ್ಗೆ ತಿಳಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ತಾಲೂಕು ಆಸ್ಪತ್ರೆಯಲ್ಲಿ ಹತ್ತಾರು ಸಮಸ್ಯೆಗಳಿದ್ದು ಜನರಿಂದ ದೂರುಗಳು ಬರುತ್ತಲೇ ಇವೆ. ಆಸ್ಪತ್ರೆಯ ಅವ್ಯವಸ್ಥೆಗೆ ಅಲ್ಲಿನ ವೈದ್ಯಾಧಿಕಾರಿಗಳೇ ಹೊಣೆಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಹಟ್ಟಿಯಂಗಡಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಪುತ್ರನ್ ಆಗ್ರಹಿಸಿದರು.

ಯುವಕರಿಗೆ ಉದ್ಯೋಗ ಎಲ್ಲಿದೆ?
ಪ್ರತಿವರ್ಷ ಜಿಲ್ಲೆಯಲ್ಲಿ ಸುಮಾರು ೩೫,೦೦೦ದಷ್ಟು ಯುವಕರು ಪದವಿ ಪಡೆದು ಹೊರಬರುತ್ತಿದ್ದು, ಅವರಿಗೆ ಉದ್ಯೋಗ ಎಲ್ಲಿದೆ ಎಂದು ಸ್ವತಃ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರೇ ಪ್ರಶ್ನೆ ಮಾಡಿದ್ದಾರೆ. ಶಾಲೆಯೊಂದರ ಅಡುಗೆ ಸಹಾಯಕಿ ಹುದ್ದೆಗೆ ಬಿಕಾಂ ಪದವೀಧರೆರ್ಯೊವರು ಅರ್ಜಿ ಸಲ್ಲಿಸಿದ ಬಗ್ಗೆ ಪ್ರಸ್ತಾಪಿಸ ಮಾತನಾಡಿ ಅವರು ಅರ್ಹತೆಯ ಆಧಾರದಲ್ಲಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದನ್ನು ಪ್ರಶ್ನಿಸಲಾಗದು. ಪ್ರತಿವರ್ಷ ಹೊರಬರುತ್ತಿರುವ ಸಾವಿರಾರು ಯುವಕರಿಗೆ ಉದ್ಯೋಗವೇ ಇಲ್ಲದಾಗಿದೆ. ಉಡುಪಿ ಮಂಗಳೂರು ಜಿಲ್ಲೆಯ ಯುವಕರು ಹೋಟೆಲ್, ಬೇಕರಿಗಳತ್ತ ಮುಖಮಾಡಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿದ್ಯುತ್ ನೀಡಲು ಪಿಡಿಓ ಅಡ್ಡಿಬರಬೇಡಿ. ಕಂದಾಯ ಇಲಾಖೆ ಚುರುಕಾಗಿ ಕಾರ್ಯನಿರ್ವಹಿಸಲಿ:
ಕೋಟೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿನ ಮನೆಗೆ ವಿದ್ಯುತ್ ನೀಡಲು ಕೆಇಬಿ ವಿಳಂಬ ಧೋರಣೆ ಅನುಸರಿಸುತ್ತಿ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಅವರು ಪ್ರಸ್ತಾಪಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ, ವಾಸ್ತವ್ಯ ದೃಢೀಕರಣಕ್ಕೆ ಪಿಡಿಓ ಸಹಿ ಇಲ್ಲದೇ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದಾಗ ಅದಕ್ಕೆ ಆಕ್ಷೇಪಿಸಿದ ಶಾಸಕರು ಪಿಡಿಓಗಳಿಗೆ ಜನರ ಕಷ್ಟ ಅರ್ಥವಾಗುವುದಿಲ್ಲ. ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಅವರು ಕಾರಣ ನೀಡುತ್ತಿದ್ದರೇ ತಾಲೂಕು ಇಓ ಅವರು ಕೂಡಲೇ ಆಗ್ಗೆ ಕ್ರಮವಹಿಸಬೇಕು ಎಂದು ತಿಳಿಸಿದರಲ್ಲದೇ, ತಾಲೂಕು ಕಛೇರಿಯಲ್ಲಿ ನೀಡುವ ವಾಸ್ತವ್ಯ ದೃಢೀಕರವನ್ನು ಕೆಇಬಿ ಪುರಸ್ಕರಿಸಬಹುದು ಎಂದು ತಿಳಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕಂದಾಯ ಇಲಾಖೆಯಲ್ಲಿ 94ಸಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಆಧಾರ್ ತಿದ್ದುಪಡಿ ವಿಳಂಬವಾಗುತ್ತಿದ್ದೆ. ಗ್ರಾಮಗಳಲ್ಲಿ ಇರಬೇಕಾದ ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಲ್ಲಿ ಡೆಪ್ಟೆಷನ್ ಹಾಕಿರುವುದರಿಂದ ಗ್ರಾಮಗಳಲ್ಲಿ ಕೆಲಸ ವಿಳಂಬವಾಗುತ್ತಿದೆ ಎಂಬ ದೂರುಗಳ ಬಂದವು. ಆ ಬಗ್ಗೆ ಕ್ರಮವಹಿಸಿವಂತೆ ಶಾಸಕರು ತಿಳಿಸಿದರು.

ತಾಲೂಕಿನ ಕೆಲವು ಭಾಗಗಳಲ್ಲಿ ಯಥೇಚ್ಛವಾಗಿ ಗಾಂಜಾ ಬೆಳೆಯಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಶಾಸಕರು, ಪಶ್ಚಿಮ ಘಟ್ಟದ ಬುಡದಲ್ಲಿನ ಮರಗಳನ್ನು ಕಡಿದು ಮಣ್ಣು ಮಾಡಲಾಗುತ್ತಿದೆ. ಇದೇ ಪ್ರಕ್ರಿಯೆ ಮುಂದುವರಿದರೆ ನಮ್ಮೂರು ಕೊಡುಗು, ಕೇರಳದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಬೇಕಾಗುತ್ತದೆ. ಅರಣ್ಯ ಇಲಾಖೆ ಇಂತಹ ಅಕ್ರಮಗಳ ವಿರುದ್ಧ ಕಠಿಣ ನಿಲುವು ತಳೆಯಬೇಕಿದೆ ಎಂದರು.

ಸಭೆಯಲ್ಲಿ  ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗೆ ಚರ್ಚಿಸಲಾಯಿತು.

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ಕಿಶನ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು  ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

.

Exit mobile version