ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾನ್ಯ ಸಭೆಯಲ್ಲಿ ಪಾಲನಾ ವರದಿಗೆ ಉತ್ತರ ದೊರೆತಿಲ್ಲ ಹಾಗೂ ಹಲವು ಅಧಿಕಾರಿಗಳು ಗೈರಾಗಿರುವ ಕಾರಣವನ್ನು ಮುಂದಿಟ್ಟುಕೊಂಡು ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದ ಪ್ರಸಂಗ ನಡೆದಿದೆ.
ಸದಸ್ಯ ಕರಣ ಪೂಜಾರಿ ಮಾತನಾಡಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಪಾಲನ ವರದಿಯಲ್ಲಿ ಉತ್ತರವೇ ನೀಡದಿದ್ದರೇ ಸಾಮಾನ್ಯ ಸಭೆ ನಡೆಸುವುದರ ಅಗತ್ಯವೇನಿದೆ. ಸಭೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯುವ ತನಕ ಸಭೆಯನ್ನು ಮುಂದೆ ಹಾಕಿ ಎಂದು ಆಗ್ರಹಿಸಿದರು.
ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಆರ್‌ಆರ್‌ಟಿ ವಿಲೆ ಮಾಡಿ ಮತ್ತು ವಿಲೇವಾರಿ ಮಾಡಿದ ಫೈಲುಗಳ ಬಗ್ಗೆ ಮಾಹಿತಿ ಕೇಳಿದ್ದೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಮೂರು ವರ್ಷಗಳಿಂದ ಜನರು ಹಣ ಕಟ್ಟಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಉತ್ತರಿಸಬೇಕಾದ ಕುಂದಾಪುರ ತಹಶೀಲ್ದಾರರೇ ಗೈರಾಗಿದ್ದಾರೆ. ನಾವು ಬೇರೆ ಬೇರೆ ಇಲಾಖೆಗೆ ಕೇಳಿದ ಯಾವುದೇ ಪ್ರಶ್ನೆಗೂ ಉತ್ತರವಿಲ್ಲ ಎಂದು ಆರೋಪಿಸಿದರು.
ಸದಸ್ಯ ಉಮೇಶ್ ಕಲ್ಗದ್ದೆ ಮಾತನಾಡಿ ಹಿಂದಿನ ಸಾಮಾನ್ಯ ಸಭೆ ನಡೆದು ಎರಡೂವರೆ ತಿಂಗಳು ನಡೆದರೂ ಕಳೆದ ಸಭೆಯ ಪಾಲನಾ ವರದಿಗೆ ಒಂದು ವಾರದ ಹಿಂದಿನ ತನಕ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರ ಸಹಿ ಆಗಿಲ್ಲ. ಅಧಿಕಾರಿಗಳನ್ನು ದೂರುವ ಬದಲಿಗೆ ತಾಲೂಕು ಪಂಚಾಯತಿಯಿಂದ ಯಾಕೆ ಸಹಿ ಹಾಕಿಲ್ಲ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳ ಕರ್ತವ್ಯನ್ಯೂನ್ಯತೆ ಬಗೆಗೆ ಕೆಡಿಪಿ ಸಭೆಯಲ್ಲಿ ತಿಳಿಸಬಹುದಾಗಿತ್ತು. ಆದರೆ ಅಲ್ಲಿಯೂ ಅಧ್ಯಕ್ಷರು ಸುಮ್ಮನಿದ್ದರು ಈಗ ಆರೋಪಿಸಿ ಏನು ಉಪಯೋಗ ಎಂದರು.
ಸದಸ್ಯರಾದ ಜ್ಯೋತಿ ಪುತ್ರನ್, ಜಗದೀಶ ದೇವಾಡಿಗ, ಜಗದೀಶ ಪೂಜಾರಿ, ಪುಪ್ಪರಾಜ ಶೆಟ್ಟಿ, ಸುಜಾತ ದೇವಾಡಿಗ, ಪ್ರವೀಣ ಶೆಟ್ಟಿ ನಾಡ ಮೊದಲಾದವರು ಮಾತನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್ ಮಾತನಾಡಿ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ಕಳುಹಿಸಿರುವುದಲ್ಲದೇ, ಎಲ್ಲಾ ಅಧಿಕಾರಿಗಳಿಗೂ ಪೋನ್ ಮೂಲಕ ತಿಳಿಸಲಾಗಿದೆ. ಆದಾಗ್ಯ ಅವರು ಬೇರೆ ಸಭೆಯ ಮಾಹಿತಿ ನೀಡಿ ತಪ್ಪಿಸಿಕೊಂಡಿದ್ದಾರೆ. ಅದಕ್ಕೆ ನಮ್ಮನ್ನು ದೂರುವುದು ಸರಿಯಲ್ಲ. ಸದಸ್ಯರ ಆಗ್ರಹದ ಮೇರೆಗೆ ಸಭೆಯನ್ನು ನವೆಂಬರ್ 26ಕ್ಕೆ ಸಭೆಯನ್ನು ಮುಂದೂಡಲಾಗುವುದು ಎಂದರು.
ಸಾಮಾನ್ಯ ಸಭೆಯು ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಬೇಕಿದ್ದು ಸದಸ್ಯರು ಹಾಜರಾಗಲು ವಿಳಂಬ ಮಾಡಿದ್ದರಿಂದ ಕೋರಂ ಇಲ್ಲದ ಕಾರಣ ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಗಿತ್ತು.
ತಾಪಂ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ ಉಡುಪ, ಬೈಂದೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಇದ್ದರು.