Kundapra.com ಕುಂದಾಪ್ರ ಡಾಟ್ ಕಾಂ

ಒಡೆಯ ಮತ್ತು ಓದುಗನ ನಡುವೆ ಪತ್ರಕರ್ತ ದಿಕ್ಕೆಟ್ಟು ನಿಂತಿದ್ದಾನೆ: ದಿನೇಶ್ ಅಮೀನ್ ಮಟ್ಟು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಧ್ಯಮ ಕ್ಷೇತ್ರವನ್ನು ವೃತ್ತಿಯಾಗಿ ನೋಡಿದರೆ ಅದು ಓದುಗನ ಋಣದಲ್ಲಿಯೂ ಇಲ್ಲ. ಉದ್ಯಮವಾಗಿ ಪರಿಗಣಿಸಿದರೆ ಅದು ಬಳಕೆದಾರನ ಋಣದಲ್ಲಿಯೂ ಇಲ್ಲ. ಬಂಡವಾಳ ಹೂಡಿ ಲಾಭ ತೆಗೆಯುವ ಮಾಧ್ಯಮ ಕ್ಷೇತ್ರದಲ್ಲಿ ಒಡೆಯ ಮತ್ತು ಓದುಗನ ನಡುವೆ ಪತ್ರಕರ್ತ ದಿಕ್ಕೆಟ್ಟು ನಿಂತಿದ್ದಾನೆ ಎಂದು ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದ ಕುರಿತು ಅವರು ಮಾತನಾಡಿದರು.

ಜಗತ್ತಿನಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಪತ್ರಿಕೆ ಮಾತ್ರ. ಆದರೆ ಓದುಗ ಕೊಡುವ ಹಣದಿಂದ ಪತ್ರಿಕೆಯೂ ನಡೆಯುತ್ತಿಲ್ಲ. ಬಂಡವಾಳವಿಲ್ಲದೇ ಏನು ನಡೆಯುವುದೂ ಇಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಕವಲು ದಾರಿಯಲ್ಲಿರುತ್ತದೆ. ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಪತ್ರಿಕೆಗಳಿಗೆ ಹತ್ತರಿಂದ ಹದಿನೈದು ರೂಪಾಯಿ ಇದೆ. ಭಾರತದಲ್ಲಿ ಪತ್ರಿಕೆಗಳು ಮೂರು, ನಾಲ್ಕು ರೂಪಾಯಿಗಳಿಗೆ ಕಡಲೆಪುರಿಯಂತೆ ಮಾರಾಟವಾಗುತ್ತಿದೆ. ಕಡಿಮೆ ದರದ ಪತ್ರಿಕೆಗಳ ಹಿಂದೆ ಓಡುವವವರು ಪತ್ರಿಕೆಗಳು ಸರಿಯಿಲ್ಲ ಎನ್ನುತ್ತಾರೆ. ಓದುಗರೆ ಪತ್ರಿಕೆಯನ್ನು ಜಾಹೀರಾರುದಾರನ ಪಾದದಡಿ ಕೊಂಡುಹೋಗಿ ನಿಲ್ಲಿಸುತ್ತಿದ್ದಾರೆ ಎಂದ ಅವರು ವಿಶ್ವಾಸಾರ್ಹತೆ ಕಳೆದುಕೊಂಡರೆ ಪತ್ರಿಕೆ ರದ್ದಿಯಾಗುತ್ತದೆ. ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಿದೆ. ಓದುಗ ಪತ್ರ್ರಿಕೆಗಳನ್ನು ಓದುತ್ತಾನೆ, ಆದರೆ ಆತ ಪತ್ರಿಕೆಗಳನ್ನು ನಂಬುತ್ತಿಲ್ಲ ಎಂಬುದು ವಿಷಾದದ ಸಂಗತಿ ಎಂದರು.

ಸೂಕ್ಷ್ಮತೆ ಇಲ್ಲದವ ಪತ್ರಕರ್ತನಾಗಲು ಸಾಧ್ಯವಿಲ್ಲ. ಆದರೆ ನಮ್ಮ ಕೆಲಸ ಬಹಳ ಬೇಗ ನಮ್ಮನ್ನು ಇನ್‌ಸೆನ್ಸಿಟಿವ್ ಆಗಿ ಮಾಡಿ ಬಿಡುತ್ತದೆ. ಆದರೆ ಪತ್ರಕರ್ತರು ಆಟದಲ್ಲಿ ಅಂಪೈರ್‌ಗಳಾಗಿರಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ನಾವೇ ಆಟದೊಳಗೆ ಸೇರಿ ಆಟಗಾರರಾಗಿ ಬಿಡುತ್ತೇವೆ. ಯಾವುದೇ ಸವಲತ್ತು ಇಲ್ಲದ ಕಾಲದಲ್ಲಿ ಒಬ್ಬ ಪತ್ರಕರ್ತನಿಗಿದ್ದ ಮರ್ಯಾದೆ ಇವತ್ತು ಎಲ್ಲಾ ಸವಲತ್ತುಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಪತ್ರಕರ್ತನ ಬಗ್ಗೆ ಇದೆಯಾ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ. ಜಿಲ್ಲಾ, ತಾಲೂಕು ಮಟ್ಟದ ಪತ್ರಿಕೆಯೇ ಭವಿಷ್ಯದ ಮಾಧ್ಯಮವಾಗಿದೆ ಎಂದೆನಿಸುತ್ತದೆ ಎಂದರು.

ಸಂವಿಧಾನದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವೇ ಇರುವುದು. ನಾಲ್ಕನೇ ಅಂಗ ಮಾಧ್ಯಮ ಎನ್ನುವುದು ಇಲ್ಲ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡುವುದು ನಾವು. ಜನರ ತೆರಿಗೆ ಹಣದಿಂದ ಅವರೆಲ್ಲರಿಗೂ ಸಂಬಳ ಹೋಗುತ್ತದೆ. ಹೀಗಾಗಿ ಜನರಿಗೆ ಅವರನ್ನು ಪ್ರಶ್ನೆ ಮಾಡುವ ಅಧಿಕಾರ ಇದೆ. ಅದರಂತೆ ಮಾಧ್ಯಮದವರಿಗೂ ಇದೆ. ಆದರೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಅಲ್ಲ. ಈ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಙಾವಿಧಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಬೋಧಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆಸಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್ ಎಸ್ ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್ ಆಚಾರ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಧನ್ಯವಾದವಿತ್ತರು. ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version