Kundapra.com ಕುಂದಾಪ್ರ ಡಾಟ್ ಕಾಂ

ಕಡಲತೀರ ಸ್ವಚ್ಛತೆಯಲ್ಲಿ ಜೊತೆಯಾದ ಕುಂದಾಪುರ ಪೊಲೀಸ್ ಪಡೆ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸುವ ಸದುದ್ದೇಶದೊಂದಿಗೆ ಒಂದಿಷ್ಟು ಸಮಾನ ಮನಸ್ಕರು ಜೊತೆಯಾಗಿ ಹಮ್ಮಿಕೊಂಡಿರುವ ’ಕ್ಲೀನ್ ಕುಂದಾಪುರ ಪ್ರಾಜೆಕ್ಟ್’ ಅಭಿಯಾನಕ್ಕೆ ಕುಂದಾಪುರದ ಪೊಲೀಸರು ಕೈಜೋಡಿಸಿದ್ದು, ಭಾನುವಾರ ಕೋಡಿ ಕಡಲ ಕೀನಾರೆಯಲ್ಲಿ ಜರುಗಿದ ಸ್ವಚ್ಛತಾ ಕಾರ್ಯದಲ್ಲಿ ಕುಂದಾಪುರದ ಎಎಸ್ಪಿ ಹರಿರಾಮ್ ಶಂಕರ್ ಸೇರಿದಂತೆ ಉಪವಿಭಾಗದ ವಿವಿಧ ಪೊಲೀಸ್ ಠಾಣಾ ಸಿಬ್ಬಂಧಿಗಳು ಸ್ವಯಂಪ್ರೇರಣೆಯಿಂದ ಭಾಗವಹಿಸಿದರು.

ಕೋಡಿ ಸೀವಾಕ್ ಸಮೀಪ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯದಲ್ಲಿ ಕುಂದಾಪುರ ವಿಭಾಗದ ಎಎಸ್ಪಿ ಹರಿರಾಮ್ ಶಂಕರ್, ವೃತ್ತನಿರೀಕ್ಷಕ ಮಂಜಪ್ಪ ಡಿ.ಆರ್ ಅವರ ನೇತೃತ್ವದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರ ಕಛೇರಿ, ಕುಂದಾಪುರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ, ಕುಂದಾಪುರ ಸಂಚಾರಿ ಪೊಲೀಸ್ ಠಾಣೆ, ಕೊಲ್ಲೂರು, ಗಂಗೊಳ್ಳಿ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಯ ಸುಮಾರು ೩೦ಕ್ಕೂ ಹೆಚ್ಚು ಸಿಬ್ಬಂಧಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದದರು. ಎಎಸ್ಪಿ ಹರಿರಾಮ್ ಶಂಕರ್ ಅವರ ಪತ್ನಿ ಅನಂತಾ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಕಳೆದು ಕೆಲವು ತಿಂಗಳುಗಳಿಂದ ಪ್ರತಿ ಭಾನುವಾರ ನಿರಂತರವಾಗಿ ನಡೆಯುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಯಶಸ್ವಿಯಾಗಿ ಸ್ವಚ್ಛತಾ ಕಾರ್ಯವನ್ನು ನಡೆಯುತ್ತಿದೆ. ಕೋಡಿ ಕಡಲ ಕಿನಾರೆಯಲ್ಲಿ ಒಟ್ಟಾದ ತ್ಯಾಜ್ಯವನ್ನು ಕುಂದಾಪುರ ಪುರಸಭೆಗೆ ಹಸ್ತಾಂತರಿಸಲಾಯಿತು.

ಸದಾ ಕರ್ತವ್ಯದಲ್ಲಿ ಬ್ಯೂಸಿ ಇರುವ ಪೊಲೀಸರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

 

Exit mobile version