Kundapra.com ಕುಂದಾಪ್ರ ಡಾಟ್ ಕಾಂ

ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಹಾಸ್ಯವಿದೆ: ಎಎಸ್‌ಎನ್ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಸ್ಯಗಾರರು ಮೊದಲು ನಮ್ಮನ್ನು ನಾವೇ ಹಾಸ್ಯ ಮಾಡಿ ಹಾಸ್ಯಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಎಲ್ಲರನ್ನೂ ನಗಿಸಲು ಸಾಧ್ಯವಿದೆ ಎಂದು ಸಾಹಿತಿ, ವಕೀಲರಾದ ಎಎಸ್‌ಎನ್ ಹೆಬ್ಬಾರ್ ಹೇಳಿದರು.

ಅವರು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಜರುಗಿದ ನಾಲ್ಕು ದಿನಗಳ ಕಾರ್ಟೂನು ಹಬ್ಬದ ಕೊನೆಯ ದಿನ ಕುಂದಾಪ್ರ ಕನ್ನಡ ಕಾಮಿಡಿ ‘ನಿತ್ಕ ಕಾಮಿಡಿ ಕೂತ್ಕ ನಗಾಡಿ’ಗೆ ಚಾಲನೆ ನೀಡಿ ಮಾತನಾಡಿ ಬದುಕಿನ ಪ್ರತಿಹೆಜ್ಜೆಯಲ್ಲಿಯೂ ಹಾಸ್ಯ ಕಾಣಬಹುದಾಗಿದ್ದು ಅದನ್ನು ಗ್ರಹಿಸುವ ಗುಣವಿರಬೇಕು. ಕಾರ್ಟೂನು ದೇಶದ ಆಗು ಹೋಗುಗಳ ಬಗ್ಗೆ ತಿಳಿಸುವ ವಕ್ರರೇಖೆಗಳ ಪ್ರತಿಫಲನ. ಅಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಆಶಯವಿರುತ್ತದೆ ಎಂದರು.

ಸಮಾರಂಭದಲ್ಲಿ ಕುಂದಾಪುರದ ಕ್ರೀಡಾ ತರಬೇತುದಾರರಾದ ನಿತ್ಯಾನಂದ ಕೆ., ಶ್ರೀನಿವಾಸ್ ಶೆಟ್ಟಿ ಆನಗಳ್ಳಿ, ಪ್ರದೀಪ್ ವಾಜ್, ಗೌತಮ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕುಂದಾಪ್ರ ಕನ್ನಡ ಕಾಮಿಡಿ ಕಿಲಾಡಿಗಳಾದ ಮನು ಹಂದಾಡಿ, ಚೇತನ್ ನೈಲಾಡಿ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಟೂನು ಹಬ್ಬದ ಸಂಘಟಕ ಹಾಗೂ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ರವಿಕುಮಾರ್ ಗಂಗೊಳ್ಳಿ ಮೊದಲಾದವರು ಇದ್ದರು.

Exit mobile version