Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಹಿತ್ಯವು ಧರ್ಮ, ರಾಜಕೀಯದಿಂದ ಹೊರತಾಗಿರಲಿ: ಡಾ| ಸುಬ್ರಹ್ಮಣ್ಯ ಭಟ್

ಬೈಂದೂರು: ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಗಳಾಗಬೇಕು ಎಂಬ ಉದ್ದೇಶದಿಂದ ಸಾಹಿತ್ಯ ಸೃಷ್ಠಿಯಾಗುತ್ತಿದೆ. ಅತಿ ಹೆಚ್ಚು ಜ್ಞಾನಪೀಠ ಪಡೆದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಯಾರೆಂದು ಗುರುತಿಸಲು ಕಷ್ಟವಾಗುತ್ತಿರುವುದು ವಿಷಾದನೀಯ ಎಂದು ಡಾ| ಸುಬ್ರಮಣ್ಯ ಭಟ್ ಹೇಳಿದರು.

ಅವರು ಯುಸ್ಕೋರ್ಡ್ ಟ್ರಸ್ಟ್ (ರಿ) ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಮೂರನೇ ದಿನದಂದು ಕಾವ್ಯೋತ್ಸವ- ಕವಿಗೋಷ್ಠಿಯಲ್ಲಿ ಶುಭಶಂಸನೆಗೈಯುತ್ತಾ ಸಾಹಿತ್ಯವೆನ್ನುವುದು ಜಾತಿ, ಧರ್ಮ, ರಾಜಕೀಯದ ಹೊರತಾಗಿರಬೇಕು ಎಂದರು.

ಬೈಂದೂರು ಗ್ರಾ.ಪಂ ಅಧ್ಯಕ್ಷ ಯು. ಜನಾರ್ಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ಊರಿನಲ್ಲೂ ಸಾಕಷ್ಟು ಯುವ ಬರಹಗಾರರು ಇದ್ದಾರೆ. ಆದರೆ ಅವರೆಲ್ಲರೂ ಬೆಳಕಿಗೆ ಬರುವುದು ಕಡಿಮೆ. ಅವರಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ಮುಂದೆ ಉತ್ತಮ ಸಾಹಿತಿಗಳಾಗಿ ಹೊರಹೊಮ್ಮುತ್ತಾರೆ ಎಂದರು.

ಮುಖ್ಯ ಅಥಿತಿಗಳಾಗಿ ತಾ.ಪಂ. ಸದಸ್ಯ ಕೆ. ರಾಮ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿ. ಎ. ಮೇಳಿ, ಉಪಸ್ಥಿತರಿದ್ದರು.  ಯಸ್ಕೋರ್ಡ್ ಟ್ರಸ್ಟ್ ನ ಸುಧಾಕರ ಪಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು.

ಯುವ ಕವಿಗಳಾದ ಚಂದ್ರ ಕೆ. ಹೆಮ್ಮಾಡಿ, ಶೇಖರ ದೇವಾಡಿಗ, ನಾಗರಾಜ ಅಲ್ತಾರು, ರಮೇಶ ಗೌಡ, ಪೂರ್ಣಿಮಾ ಭಟ್ ತಮ್ಮ ಕವನಗಳನ್ನು ವಾಚಿಸಿದರು

Exit mobile version