Kundapra.com ಕುಂದಾಪ್ರ ಡಾಟ್ ಕಾಂ

ಜನಸೇವೆ ಮತವಾಗಿ ಪರಿವರ್ತನೆಯಾಗದು: ಕೆ. ಜಯಪ್ರಕಾಶ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.

ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಕೆ. ಜಯಪ್ರಕಾಶ ಹೆಗ್ಡೆ ಅವರು ಪ್ರತಿಕ್ರಿಯಿಸಿ ಜನಪ್ರತಿನಿಧಿಯಾಗಿ ಮಾಡಿದ ಕಾರ್ಯಕ್ಕಿಂತ ಜನಪರವಾಗಿ ಮಾಡಿದ ಕಾರ್ಯಗಳು ನೆಮ್ಮದಿಗೆ ಕಾರಣವಾಗುತ್ತವೆ. ಜನರ ಕೆಲಸ ಮಾಡಲು ರಾಜಕೀಯವೇ ಬೇಕಿಲ್ಲ. ಕೆಲಸ ಮಾಡದಿದ್ದರೇ ವಯಸ್ಸಾದಂತೆ ಅನ್ನಿಸುತ್ತದೆ ಎಂದ ಅವರು, ಪಕ್ಷದ ಮೂಲಕ ಸ್ವರ್ಧಿಸಿ ಗೆದ್ದಾಗ ಆದ ಖುಷಿಗಿಂತ ಪಕ್ಷೇತರನಾಗಿ ಗೆದ್ದು ಜನಸೇವೆ ಮಾಡಿದ್ದು ಇಂದಿಗೂ ಖುಷಿಯ ಸಂಗತಿ. ರಾಜಕೀಯದಲ್ಲಿ ಎಡವಿದ್ದೇನೆ. ಮುಂಬರುವ ಚುನಾವಣೆಗಳಲ್ಲಿ ಸ್ವರ್ಧಿಸುವ ಇಂಗಿತವಿದೆ. ಆದರೆ ಆ ಕಾರಣಕ್ಕಾಗಿ ಜನಸೇವೆ ಮಾಡುತ್ತಿಲ್ಲ. ಜನಸೇವೆ ಮತವಾಗಿ ಬದಲಾಗುವುದಿಲ್ಲ ಎಂಬುದು ತಿಳಿದಿದೆ ಎಂದು ಮನಬಿಚ್ಚಿ ಮಾತನಾಡಿದರು.

ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ನಿಗದಿ ಅವಧಿ ಒಳಗೆ ಫ್ಲೈ ಓವರ್ ಕಾಮಗಾರಿ ಪೂರ್ತಿಗೊಂಡಿದ್ದರೆ, ಯಾರೂ ಈ ಕುರಿತು ಮಾತನಾಡುತ್ತಿರಲಿಲ್ಲ. ಇದೀಗ ಫ್ಲೈ ಓವರ್ ಬೇಕಿತ್ತೇ ಎನ್ನುವ ಜಿಜ್ಞಾಸೆ ಹುಟ್ಟುಹಾಕಲಾಗುತ್ತಿದೆ. ಕುಂದಾಪುರ ನಗರದ ಮುಂದಿನ 50 ವರ್ಷಗಳ ಬೆಳವಣಿಗೆ ಹಾಗೂ ಹೆಚ್ಚಾಗುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಫ್ಲೈಓವರ್ ಅಗತ್ಯವಿದೆ ಎಂದು ಅವರು ಕೆಲ ದಿನಗಳ ಹಿಂದೆ ಮಾಜಿ ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಅವರು ಹಿಂದೆ ಆಗಿರುವ ಬಗ್ಗೆ ಚಿಂತಿಸದೇ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಚಿಂತಿಸಬೇಕಿದೆ ಎಂದರು.

ಕೇಂದ್ರ ಸರ್ಕಾರದ 2018ರ ಆಗಸ್ಟ್‌ನಲ್ಲಿ ಅಧಿಸೂಚನೆಯಲ್ಲಿ ಸಿಆರ್‌ಝಡ್ ವ್ಯಾಪ್ತಿ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಅವಕಾಶದಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿತ್ತು. ಈ ಕುರಿತು ರಾಜ್ಯ ಸರ್ಕಾರ ಕರಾವಳಿ ಭಾಗದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು. ಸೇತುವೆ ಹಾಗೂ ಡ್ಯಾಂ ಪ್ರದೇಶಗಳ ತಳ ಭಾಗಕ್ಕೆ ಹಾನಿಯಾಗದಂತೆ ಮರಳು ತೆಗೆಯಲು ತೀರ್ಮಾನ ಕೈಗೊಂಡಲ್ಲಿ ಕುಂದಾಪುರ, ಬೈಂದೂರು ಸೇರಿದಂತೆ ಕರಾವಳಿ ತೀರ ಪ್ರದೇಶದ ಜನರಿಗೆ ಉಪಯೋಗ ಆಗಲಿದೆ. ಬರುವ ಎಲ್ಲರೂ ಸರದಿ ಸಾಲಿನಲ್ಲಿಯೇ ಬರುವ ಒಂದೆ ಮಾನದಂಡವಿರಬೇಕು. ವೇ ಬ್ರಿಡ್ಜ್ ನಿರ್ಮಾಣ ಮಾಡುವುದರಿಂದ ತೂಕ ಹಾಗೂ ವಾಹನದ ಸಂಖ್ಯೆಯ ಕರಾರುವಕ್ಕಾದ ಲೆಕ್ಕ ದೊರಕುವ ನಿರೀಕ್ಷೆ ಇರುವುದಾಗಿ ತಿಳಿಸಿದ ಅವರು, ಈ ಭಾಗದ ಪ್ರಮುಖ ಸಮಸ್ಯೆಗಳಾದ ಮರಳು ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ಶಾಶ್ವತ ಪರಿಹಾರ ಕಾಣಬೇಕು ಎಂದು ಅವರು ಹೇಳಿದರು.

ಕೇಂದ್ರದ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 40 ಕೋಟಿ ವೆಚ್ಚದಲ್ಲಿ 5 ಜಿಲ್ಲೆಗಳಿಗೆ ಒಂದರಂತೆ ಪ್ರಾರಂಭವಾಗಲಿರುವ ವಸತಿ ಶಾಲೆಯೊಂದನ್ನು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸುವ ಕುರಿತು ಮನವಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ದೊರೆಕಿದೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಇದರಿಂದ ಅನೂಕೂಲವಾಗಲಿದೆ. ಸಿಇಟಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿಯೇ ತರಬೇತಿ ನೀಡುವ ಅವಕಾಶಗಳು ಇದೆ ಎಂದು ಅವರು ಹೇಳಿದರು.

ಜಿಲ್ಲೆಯ ಪ್ರಮುಖ ಯೋಜನೆ ವರಾಹಿ, ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಹಾಗೂ ಒಳಚರಂಡಿ ಯೋಜನೆ ಸಮಸ್ಯೆ ಬಗೆಹರಿಸಲು ಸಮುಷ್ಠಿ ಚರ್ಚೆಯ ಅವಶ್ಯಕತೆ ಇದೆ. ಚತುಷ್ಟಥ ಕಾಮಗಾರಿಯ ಟೆಂಡರ್‌ನ್ನು ರದ್ದುಪಡಿಸಿ ಹೊಸ ಟೆಂಡರ್ ಪ್ರಕ್ರಿಯೆಗೆ ಹೋದರೆ ಅನಗತ್ಯ ಕಾನೂನು ಸಮಸ್ಯೆಗಳು ಸೃಷ್ಟಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾಗರಾಜ್ ರಾಯಪ್ಪನ್‌ಮಠ ಇದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ. ಸಿ ರಾಜೇಶ್ ಸ್ವಾಗತಿಸಿದರು.

 

Exit mobile version