Kundapra.com ಕುಂದಾಪ್ರ ಡಾಟ್ ಕಾಂ

ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಪ್ರತಿಭಟನೆ

ಗಂಗೊಳ್ಳಿ: ಕಳೆದ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ ಗಂಗೊಳ್ಳಿಯ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಿಸದಿರುವ ಹಾಗೂ ಕಳೆದ ಹಲವು ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಗಂಗೊಳ್ಳಿ ನಾಗರಿಕರು ಗಂಗೊಳ್ಳಿಯ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಗಂಗೊಳ್ಳಿಯ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಪೋಸ್ಟ್ ಆಫೀಸಿನ ಬಳಿಯಿಂದ ಮೆರವಣಿಗೆ ಮೂಲಕ ಮೇಲ್‌ಗಂಗೊಳ್ಳಿಯಲ್ಲಿರುವ ಮೆಸ್ಕಾಂ ಕಛೇರಿಗೆ ತೆರಳಿದ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿದರು. ಕಳೆದ ಸುಮಾರು ಐದು ವರ್ಷಗಳ ಹಿಂದೆ ಮಂಜೂರಾಗಿದ್ದ ಗಂಗೊಳ್ಳಿಯ ಮೆಸ್ಕಾಂ ಸಬ್‌ಸ್ಟೇಶನ್‌ನ ಕಾಮಗಾರಿ ಪೂರ್ಣಗೊಂಡು ಸುಮಾರು ಎರಡು ವರ್ಷ ಕಳೆದಿದ್ದರೂ ಸಬ್‌ಸ್ಟೇಶನ್ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಸಬ್‌ಸ್ಟೇಶನ್‌ನಲ್ಲಿ ಅಳವಡಿಸಲಾಗಿರುವ ಯಂತ್ರೋಪಕರಣಗಳಿಗೆ ತುಕ್ಕು ಹಿಡಿಯಲಾರಂಭಿಸಿದೆ. ಆದುದರಿಂದ ಇನ್ನೊಂದು ತಿಂಗಳೊಳಗೆ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಎದುರಾಗಿರುವ ತೊಡಕುಗಳನ್ನು ನಿವಾಸಿ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಪ್ರಯತ್ನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಳೆದ ಹಲವು ದಿನಗಳಿಂದ ದಿನವೀಡಿ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸಂಜೆ ಬಳಿಕ ವಿದ್ಯುತ್ ಕಡಿತಗೊಂಡರೆ ಅದನ್ನು ದುರಸ್ಥಿಪಡಿಸಲು ಸಿಬ್ಬಂದಿಗಳು ಇಲ್ಲ. ಗ್ರಾಮದಲ್ಲಿ ವಾಸ್ತವ್ಯ ಇರುವ ಲೈನ್‌ಮ್ಯಾನ್‌ಗಳು ಗ್ರಾಹಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ರಾತ್ರಿಯಿಡಿ ವಿದ್ಯುತ್ ಇಲ್ಲದೆ ಕಾಲ ಕಳೆಯಬೇಕಾಗಿದೆ ಅಲ್ಲದೆ ಸಣ್ಣಪುಟ್ಟ ಅಡಚಣೆಗಳು ಹಾಗೂ ತೊಂದರೆಗಳನ್ನು ನೆಪವಾಗಿರಿಕೊಂಡು ಇಡೀ ಗಂಗೊಳ್ಳಿ ಗ್ರಾಮಕ್ಕೆ ವಿದ್ಯುತ್ ಕಡಿತ ಮಾಡುತ್ತಿರುವುದು ಪರಿಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಅನಿಯಮಿತ ವಿದ್ಯುತ್‌ಕಡಿತ ಹಾಗೂ ಲೋಡ್ ಶೆಡ್ಡಿಂಗ್ ನಿಲ್ಲಬೇಕು ಎಂದು ಪ್ರತಿಭಟನಾಕಾರರು ಮನವಿಯ ಮೂಲಕ ಒತ್ತಾಯಿಸಿದ್ದು, ಗ್ರಾಹಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಹಾಗೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಅವರು ಮನವಿಯನ್ನು ಮೆಸ್ಕಾಂ ಬೈಂದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಅವರಿಗೆ ಸಲ್ಲಿಸಿದರು. ಗಂಗೊಳ್ಳಿ ವಿಭಾಗದ ಜೆಇ ರಾಘವೇಂದ್ರ ಎನ್., ಮೇಲ್ವಿಚಾರಕ ವಿಜಯಕುಮಾರ್ ಉಪಸ್ಥಿತರಿದ್ದರು. ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಗೋಪಾಲ ಖಾರ್ವಿ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗೋಪಾಲ ಚಂದನ್, ದಿನೇಶ ಪೂಜಾರಿ, ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ ಪಟೇಲ್, ಉಮಾನಾಥ ದೇವಾಡಿಗ, ರತ್ನಾಕರ ಗಾಣಿಗ, ನವೀನ ಪೂಜಾರಿ, ಮುನಾಫ್ ಸಾಹೇಬ್, ಇಬ್ರಾಹಿಂ ಸಾಹೇಬ್, ಬಿ.ಪ್ರಕಾಶ ಶೆಣೈ, ವೀರೇಂದ್ರ ಶೆಣೈ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Exit mobile version