Kundapra.com ಕುಂದಾಪ್ರ ಡಾಟ್ ಕಾಂ

ನಕಲಿ ಟಿವಿ ಚಾನೆಲ್‌, ಅನಧಿಕೃತ ಮಾಧ್ಯಮಗಳ ವಿರುದ್ಧ ಕ್ರಮ: ಡಿಸಿ ಜಿ. ಜಗದೀಶ್ ಎಚ್ಚರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಅಡಿ ಚಾನೆಲ್‌ಗಳು ನೋಂದಣಿಯಾಗಿರಬೇಕಿದೆ. ಆದರೆ, ಇತ್ತೀಚೆಗೆ ಟಿವಿ ಚಾನೆಲ್‌ಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಕೆಲವು ನಕಲಿ ಚಾನೆಲ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಚಾನೆಲ್‌ಗಳ ದಾಖಲೆ ಪರಿಶೀಲನೆ ನಡೆಸಿ, ನಕಲಿ ಚಾನೆಲ್‌ಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಅವರು ವಾರ್ತಾ ಇಲಾಖೆಗೆ ಸೂಚಿಸಿದರು.

ಕೇಬಲ್ ಆಪರೇಟರ್‌ಗಳ ನೋಂದಣಿ ಕಡ್ಡಾಯ:
ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ಆಪರೇಟರ್‌ಗಳು ನಿಯಮನುಸಾರ ಪ್ರಧಾನ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಲೇಬೇಕು. ಈ ಕುರಿತು ಅಂಚೆ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ನೋಂದಣಿಯಾಗದ ಕೇಬಲ್ ಆಪರೇಟರ್‌ಗಳು ಕೂಡಲೇ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೇ, ಅಂತಹ ಸಂಸ್ಥೆಗಳ ವಿರುದ್ಧಕ್ರಮ ಜರುಗಿಸಿ, ಸಂಬಂಧಪಟ್ಟ ಕೇಬಲ್ ಉಪಕರಣಗಳನ್ನು ವಶಪಡಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‌ಗಳ ಉಪಕರಣವನ್ನು ವಶಪಡಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಈ ಕಾಯಿದೆಯ ಅಧಿಕೃತ ಅಧಿಕಾರಿಗಳು ಹೊಂದಿರುತ್ತಾರೆ ಎಂದು ಅವರು ಎಚ್ಚರಿಸಿದರು.

ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ನಿಗದಿತದರವನ್ನಷ್ಟೇ ಪಡೆಯಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದ್ದಲ್ಲಿ ಸಾರ್ವಜನಿಕರು ದೂರು ನೀಡಬಹುದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ದೂರು ಕೋಶ ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲಾ ವಾರ್ತಾ ಇಲಾಖೆ ಕಚೇರಿಗೆ ಲಿಖಿತವಾಗಿದೂರು ನೀಡಬಹುದು. ಇಮೇಲ್ ಮೂಲಕವೂ (varthabhavanaudupi@gmail.com) ದೂರು ನೀಡಬಹುದು. ಗ್ರಾಹಕರಿಂದ ಪಡೆಯುವ ಮಾಸಿಕ ಶುಲ್ಕಕ್ಕೆ ರಶೀದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಟಿವಿಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಭಂಗ ಅಥವಾ ಯಾವುದೇ ಸಮುದಾಯಗಳ ಮಧ್ಯೆ ವೈರತ್ವ, ನೋವು ಉಂಟು ಮಾಡಿದರೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಮಾಜದ ಹಿತಕ್ಕೆ ಭಂಗತರುವಂತಹ ಕಾರ್ಯಕ್ರಮ ಮತ್ತು ಆಕ್ಷೇಪಾರ್ಹ ದೃಶ್ಯಪ್ರಸಾರ ಮಾಡುವ ಯಾವುದೇ ಕೇಬಲ್ ಅಪರೇಟರ್ ಅಥವಾ ಚಾನೆಲ್ ವಿರುದ್ಧ ನಿಯಾಮಾನುಸಾರ ಕ್ರಮ ತೆಗೆದುಕೊಳ್ಳಲಾಗುವ ಅಧಿಕಾರ ಸಮಿತಿಗೆ ಇದೆ ಎಂದು ಜಗದೀಶ್ ತಿಳಿಸಿದರು.

ಇ-ಪೇಪರ್ ಹಾಗೂ ಮೊಬೈಲ್ ಲಿಂಕ್ ಮೂಲಕ ಸುದ್ದಿಗಳನ್ನು ಕಳುಹಿಸುವ ಮಾಧ್ಯಮಗಳು ನೋಂದಣಿಯಾಗಬೇಕಿದೆ. ಅನಧಿಕೃತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಅನಪೇಕ್ಷಿತ ಕಾರ್ಯಕ್ರಮ ಪ್ರಸಾರವಾದರೆ ದೂರು ನೀಡಿ: ಖಾದರ್ ಶಾ
ಸಮಿತಿಯ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಕೇಬಲ್ ಟಿವಿ ಚಾನೆಲ್‌ಗಳ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಅನಪೇಕ್ಷಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಹಾಗೂ ಕೇಬಲ್ ಆಪರೇಟರ್‌ಗಳ ಸೇವೆಯ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಇಲಾಖೆಯಲ್ಲಿ ದೂರು ಕೋಶ ಇದೆ. ಉಡುಪಿ ಜಿಲ್ಲೆಯಲ್ಲಿ ಕೇಬಲ್ ಆಪರೇಟರ್‌ಗಳು ನೋಂದಣಿಗೊಂಡಿರುವ ಬಗ್ಗೆ ಅಂಚೆ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿ ಸದಸ್ಯರಾದ ಡಾ. ವಿರೂಪಾಕ್ಷ ದೇವರಮನೆ, ಶೃತಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

 

Exit mobile version