Kundapra.com ಕುಂದಾಪ್ರ ಡಾಟ್ ಕಾಂ

ರಾಮಕ್ಷತ್ರಿಯರ ಸಂಘಟನೆಗಾಗಿ ಸಮಾವೇಶ ಸಶಕ್ತ ವೇದಿಕೆ: ಸ್ವರ್ಣವಲ್ಲಿ ಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಂಕಿ: ನಾವುಗಳು ಕುಟುಂಬ, ಸಂಬಂಧಿಕರಷ್ಟಕ್ಕೇ ಸೀಮಿತವಾಗಿರಬಾರದು. ಮನುಷ್ಯ ಸಮಾಜ ಜೀವಿ. ಎಲ್ಲಾ ಕಡೆಯೂ ಆತ ತನ್ನದೇ ಆದ ಸಮುದಾಯವೊಂದನ್ನು ಕಟ್ಟಿಕೊಂಡಿರುತ್ತಾನೆ. ಭಾರತದಲ್ಲಿ ಮಾತ್ರ ಅದು ಜಾತಿ, ಸಮುದಾಯ ಎಂಬ ಹೆಸರಿನೊಂದಿಗೆ ಬೆಳೆದು ಬಂದಿದೆ. ಜಾತಿಯನ್ನು ವಿಘಟನೆಗೆ ಬಳಸದೇ ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಆಗತ್ಯ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಅವರು ಮಂಕಿ ಕೊಕ್ಕೇಶ್ವರ ಶಂಭುಲಿಂಗ ದೇವಸ್ಥಾನದಲ್ಲಿ ಜರುಗಿದ ರಾಮಕ್ಷತ್ರಿಯ ಬೃಹತ್ ಸಮಾವೇಶ ಹಾಗೂ ರಾಮತಾರಕ ಮಂತ್ರ ಯಜ್ಞದ ಪೂರ್ವಭಾವಿಯಾಗಿ ಹಮ್ಮಕೊಂಡ ಸಭೆಯಲ್ಲಿ ಆಶಿರ್ವಚನವಿತ್ತರು.

ಸಮಾಜವಿದ್ದರೆ ಅಪಾತ್ಕಾಲದಲ್ಲಿ ಸಹಾಯ ದೊರೆಯುತ್ತದೆ. ಆರೋಗ್ಯ, ಮಕ್ಕಳ ಶಿಕ್ಷಣ ಮುಂತಾದ ಸಂದರ್ಭಗಳಲ್ಲಿ ಸಮಾಜ ಸಹಾಯಕ್ಕೆ ಬರುತ್ತದೆ. ಸಮಾಜವಿದ್ದರೆ ನಾನು ಮತ್ತು ನನ್ನ ಕುಟುಂಬ ಇರಲಿದೆ ಎಂದು ಪ್ರತಿಯೊಬ್ಬರೂ ಅರಿಯಬೇಕಿದೆ.

ರಾಮಕ್ಷತ್ರಿಯ ಸಮಾಜ ಸಂಘಟಿತರಾಗಬೇಕಾಗಿದ್ದು, ರಾಮಕ್ಷತ್ರಿಯರ ಸಮಾವೇಶದ ಮೂಲಕ ಇದನ್ನು ಸಾಧಿಸಿ ಐತಿಹಾಸಿಕ ಕಾರ್ಯಕ್ರಮವನ್ನಾಗಿಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಮುದಾಯ ಸಂಘಟಿತವಾಗಿ ಮುನ್ನಡೆಯಬೇಕಾದರೆ ಎಲ್ಲರೂ ಒಂದಾಗಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಿದೆ ಎಂದರು.

ಈ ಸಂದರ್ಭ ರಾಮಕ್ಷತ್ರಿಯ ಸಮಾಜದ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್. ಕೆ. ನಾಯ್ಕ್, ಖಜಾಂಚಿ ರಾಮಕೃಷ್ಣ ಶೇರುಗಾರ್ ಬಿಜೂರು, ಪ್ರಧಾನ ಸಂಚಾಲಕರುಗಳಾದ ಎಸ್.ಜಿ. ನಾಯ್ಕ್ ಕುಮಟ, ಶಶಿಧರ ನಾಯ್ಕ್ ಹೊಸನಗರ, ಪ್ರಧಾನ ಕಾರ್ಯದರ್ಶಿಗಳಾದ ಆನಂದ ವಾಯ್ ನಾಯ್ಕ್, ರವೀಂದ್ರ ಗಂಗೊಳ್ಳಿ, ಕಾರ್ಯದರ್ಶಿ ರಾಜೇಶ್ ವಿ. ಸಾಳೇಹಿತ್ತಲ, ಗಣಪತಿ ಹೋಬಳಿದಾರ್ ಸೇರಿದಂತೆ ವಿವಿಧ ವಿವಿಧ ಪದಾಧಿಕಾರಿಗಳು, ಮಾತೃ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version