Kundapra.com ಕುಂದಾಪ್ರ ಡಾಟ್ ಕಾಂ

ಚತುಷ್ಪಥ ಹೆದ್ದಾರಿ ಸರಿಪಡಿಸಲು ಆಗ್ರಹಿಸಿ ಕಾಂಗ್ರೆಸ್ ನೇತೃತ್ವಲ್ಲಿ ಪಾದಯಾತ್ರೆ

ಕುಂದಾಪ್ರ ಡಾಟ್ ಕಾಂ ಸುದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರಿನಿಂದ ಶಿರೂರು ವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ತೀರ ಅವ್ಯವಸ್ಥಿತವಾಗಿ ನಡೆದಿದೆ. ಅದೇ ಕಾರಣದಿಂದ ಇಷ್ಟರಲ್ಲೇ ಹತ್ತಾರು ಸಂಚಾರಿಗಳು ಜೀವತೆತ್ತಿದ್ದಾರೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ 14ರಂದು ಮರವಂತೆಯಿಂದ ಬೈಂದೂರು ವರೆಗೆ ಪಾದಯಾತ್ರೆ ನಡೆಸಿ ಸಂಬಂಧಿಸಿದವರ ಗಮನ ಸೆಳೆಯಲಾಗುವುದು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಗುರುವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಹೆದ್ದಾರಿ ಬದಿ ಸೂಕ್ತ ಚರಂಡಿ ಇಲ್ಲವಾದುದರಿಂದ ಮಳೆಗಾಲದಲ್ಲಿ ಹೆದ್ದಾರಿ ಮೇಲೆ ನೀರು ಹರಿಯುತ್ತದೆ. ಕೆಲವೆಡೆ ಕೃತಕ ನೆರೆ ಏರ್ಪಟ್ಟು ಕೃಷಿ ಭೂಮಿಗೆ, ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಅದು ಸರಿಯಾಗಬೇಕು. ಪ್ರತೀ ಮೂರು ಕಿಲೋಮೀಟರಿಗೆ ಒಂದರಂತೆ ನಿರ್ಮಿಸಿರುವ ಯು ತಿರುವುಗಳು ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ಹಾಗೂ ಗುಣಮಟ್ಟದವುಗಳಲ್ಲ. ಅಲ್ಲಿಯೇ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅವುಗಳನ್ನು ಅಪಾಯಹಿತ ಸ್ಥಿತಿಗೆ ತರಬೇಕು. ಬೈಂದೂರು-ಕೊಲ್ಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗಿದೆ. ಅದು ಹೆದ್ದಾರಿಗೆ ಸೇರುವ ಯಡ್ತರೆ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಿಸದಿದ್ದರೆ ಪರಿಣಾಮವನ್ನು ಊಹಿಸಲೂ ಅಸಾಧ್ಯ. ಜನ, ಸಂಚಾರ ದಟ್ಟಣೆ ಇರುವೆಡೆ ಸಮಾನಾಂತರ ಸರ್ವೀಸ್ ರಸ್ತೆ ಬೇಕು. ಹೆದ್ದಾರಿ ಕಾಮಗಾರಿ ನಡೆಸುವಾಗ ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಪೈಪ್‌ಗಳನ್ನು ನಾಶಪಡಿಸಿದ್ದು, ಅವುಗಳ ದುರಸ್ತಿಯಾಗಬೇಕು ಎನ್ನುವ ಆಗ್ರಹ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಹಿಂದೆ ಸಂಸದ ಆಸ್ಕರ್ ಫೆರ್ನಾಂಡೀಸ್ ಶಿರೂರು ಮತ್ತು ಬೈಂದೂರಿನಲ್ಲಿ ನಡೆಸಿದ ಸಭೆಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಹಾಗೂ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು. ಎಲ್ಲವನ್ನು ನಿರ್ಲಕ್ಷಿಸಿ ಹಾಗೂ ಹೆದ್ದಾರಿ ಸಂಚಾರಿಗಳು, ಹೆದ್ದಾರಿ ಹಾದುಹೋಗುವ ಊರುಗಳ ನಾಗರಿಕರು ಅನುಭವಿಸುತ್ತಿರುವ ಬವಣೆಯನ್ನು ನಿರ್ಲಕ್ಷಿಸಿ ಈಗ ಕಾಮಗಾರಿ ಮುಕ್ತಾಯಗೊಳಿಸಿ ಶಿರೂರಿನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗುತ್ತಿದೆಗಿವೆ. ಇವೆಲ್ಲವನ್ನು ವಿರೋಧಿಸಿ ಮತ್ತು ಇವುಗಳನ್ನು ಸಮರ್ಪಕಗೊಳಿಸಿದ ಬಳಿಕವೇ ಶುಲ್ಕ ಸಂಗ್ರಹ ಆರಂಭಿಸಬೇಕೆಂದು ಆಗ್ರಹಿಸಿ ಈ ಶಾಂತಿಯುತ ಹೋರಾಟ ನಡೆಯಲಿದೆ. ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ವಿವಿಧ ಸಂಘಟನೆಗಳು, ಗ್ರಾಮ ಪಂಚಾಯಿತಿಗಳು, ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಹೋರಾಟದ ಪ್ರಥಮ ಹಂತವಾಗಿದ್ದು, ಬೇಡಿಕೆ ಈಡೇರದಿದ್ದರೆ ಹೆದ್ದಾರಿ ಬಂದ್, ಶುಲ್ಕ ಸಂಗ್ರಹ ತಡೆಯಂತಹ ಗಂಭೀರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಗೋಪಾಲ ಪೂಜಾರಿ, ಹೆದ್ದಾರಿ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರೂ ಇವುಗಳತ್ತ ಗಮನ ಹರಿಸಬೇಕು ಎನ್ನುವುದು ಹೋರಾಟದ ಇನ್ನೊಂದು ಉದ್ದೇಶ ಎಂದರು. 14ರ ಪಾದಯಾತ್ರೆ ಹಾಗೂ ಅದರ ಕೊನೆಯಲ್ಲಿ ಬೈಂದೂರಿನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಕ್ಷ ಕಾರ್ಯಕರ್ತರು ಮತ್ತು ಸಾರ್ವಜನಿಕರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.

ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಪ್ರಮುಖರಾದ ಎಸ್. ರಾಜು ಪೂಜಾರಿ, ಗೌರಿ ದೇವಾಡಿಗ, ಜಗದೀಶ ದೇವಾಡಿಗ, ನಾಗರಾಜ ಶೆಟ್ಟಿ, ನಾಗರಾಜ ಗಾಣಿಗ, ಮೋಹನ ಪೂಜಾರಿ, ಶೇಖರ ಪೂಜಾರಿ, ನಾರಾಯಣ ಅಳ್ವೆಗದ್ದೆ ಇದ್ದರು.

 

Exit mobile version