ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಉಪ್ಪುಂದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿಯ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಉರ್ದು ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷನಾಗಿದ್ದ ಮೋಹನ್ ಚಂದ್ರ (೪೧) ಬಂಧಿತ ಆರೋಪಿ. ಆರೋಪಿಗೆ ತಲೆಮರೆಸಿಕೊಳ್ಳಲು ಸಹಾಯ ನೀಡಿದ ಆರೋಪದ ಮೇಲೆ ಗಂಗಾಧರ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಉರ್ದು ಶಾಲೆಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರಿಗೆ ಆರೋಪಿ ಮೋಹನ್ ಚಂದ್ರ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿರುರುವುದಲ್ಲದೇ ಲೈಂಗಿಕ ದೌರ್ಜನ್ಯವೆಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಬೈಂದೂರು ಠಾಣೆಯಲ್ಲಿ ಡಿಸೆಂಬರ್ 10ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಮೋಹನ್ ಚಂದ್ರ ವಿರುದ್ದ ಈ ಹಿಂದೆಯೂ ಅದೇ ಶಾಲೆಯ ಮಮತಾ ಎನ್ನುವ ಶಿಕ್ಷಕಿಗೂ ಕಿರುಕುಳ ನೀಡಿದ ಆರೋಪವಿದ್ದು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದನು. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್‌ಚಂದ್ರನನ್ನು ಇದೀಗ ವಾರಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಈರ್ವರು ಆರೋಪಿಗಳನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಿಕ್ಷಕರೊಂದಿಗೆ ದುರ್ವರ್ತನೆ ತೋರುತ್ತಿದ್ದ ಮೋಹನ್ ಚಂದ್ರ ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 14 ರಂದು ಶಿಕ್ಷಕರ ಸಂಘದ ವತಿಯಿಂದ ಬೈಂದೂರು ತಹಸೀಲ್ದಾರ್ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಘಟನೆಗೆ ಸ್ಪಂದಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು.
ಆರೋಪಿ ಪತ್ತೆಗಾಗಿ ಕುಮಟ, ಬೈಂದೂರು, ಸುರತ್ಕಲ್, ಕಾಸರಗೋಡು ಮೊದಲಾದೆಡೆ ಕಾರ್ಯಾಚರಣೆ ನಡೆಸಿದ್ದು, ಅಂತಿಮವಾಗಿ ಮರವಂತೆ ಸಮೀಪ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್, ಪ್ರೊಬೇಶನರಿ ಪಿಎಸ್‌ಐ ಭೀಮಾಶಂಕರ್, ಕುಂದಾಪುರ ಎಎಸ್ಪಿ ತಂಡದ ಸಿಬ್ಬಂದಿಗಳಾದ ಸಂತೋಷ್, ಮಂಜುನಾಥ, ಸತೀಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:
► ಶಿಕ್ಷಕಿ ಮೇಲೆ ಹಲ್ಲೆಗೈದ ಎಸ್‌ಡಿಎಂಸಿ ಅಧ್ಯಕ್ಷನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ – https://kundapraa.com/?p=34233 .
► ವಿಡಿಯೋ – https://youtu.be/velpJ01elhA

