Kundapra.com ಕುಂದಾಪ್ರ ಡಾಟ್ ಕಾಂ

ಜ.3 & 4 ರತ್ತೂಬಾಯಿ ಜನತಾ ಪ್ರೌಢಶಾಲೆ ಸುವರ್ಣ ಮಹೋತ್ಸವ: ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆ 1970ರಲ್ಲಿ ಜನತಾ ಗರ್ಲ್ಸ್ ಹೈಸ್ಕೂಲ್ ಎಂಬ ಹೆಸರಿನೊಂದಿಗೆ ಆರಂಭಗೊಂಡು ಇಂದು ಜನತಾ ಪ್ರೌಢಶಾಲೆಯಾಗಿ ಮುನ್ನಡೆಯುತ್ತಿದ್ದು, ಜನವರಿ 3 ಹಾಗೂ 4ರಂದು ಸುವರ್ಣ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಶ್ರೀ ವಿ.ವಿ.ವಿ ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರಿನ ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ – 2020 ಪೂರ್ವಭಾವಿಯಾಗಿ ಹಮ್ಮಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜನವರಿ 3ರಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಅವರು ಸುವರ್ಣ ಸಂಭ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ ಅವರು ಭಾಗವಹಿಸಲಿದ್ದಾರೆ. ಎರಡೂ ದಿನವೂ ವಿವಿಧ ಅತಿಥಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಳೆ ವಿದ್ಯಾರ್ಥಿಗಳೊಂದಿಗೆ ಸ್ನೇಹ ಸಮ್ಮಿಲನ, ಶಿಕ್ಷಕರೊಂದಿಗೆ ಸಂವಾದ, ಶೈಕ್ಷಣಿಕ ವಿಚಾರಗೋಷ್ಠಿ, ಶೈಕ್ಷಣಿಕ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ಇದಕ್ಕೆ ಪೂರಕವಾಗಿ ಶಿಕ್ಷಕ ಬಳಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆಂಗ್ಲ ಮಾಧ್ಯಮ ವಿಭಾಗಕ್ಕೆ ಪ್ರಾಶಸ್ತ್ಯ ಸೇರಿದಂತೆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಸವರ್ಣ ಮಹೋತ್ಸವದ ಸಂದರ್ಭ ಹಮ್ಮಿಕೊಳ್ಳಲಾಗಿದೆ ಎಂದರು.

ಸುವರ್ಣ ಸಂಭ್ರಮ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ ಎರಡು ದಿನಗಳ ಕಾರ್ಯಕ್ರಮದ ಮಾಹಿತಿ ನೀಡಿದರು. ಶ್ರೀ ವಿವಿವಿ ಮಂಡಳಿ ನಿರ್ದೇಶಕ ರಘುರಾಮ ಪೂಜಾರಿ, ಉತ್ಸವ ಸಮಿತಿ ಕಾರ್ಯದರ್ಶಿ ಮಂಜು ಕಾಳಾವರ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಕೋಶಾಧಿಕಾರಿ ಆನಂದ ಮದ್ದೋಡಿ ಮೊದಲಾದವರು ಇದ್ದರು.

Exit mobile version