Kundapra.com ಕುಂದಾಪ್ರ ಡಾಟ್ ಕಾಂ

ಕೋ.ಮ ಕಾರಂತ ಪ್ರಶಸ್ತಿಗೆ ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನಂಟು ಹೊಂದಿದ್ದು, ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕುಂದಪ್ರಭ ಪ್ರತಿಷ್ಠಾನ ಪ್ರತಿವರ್ಷ ನೀಡುತ್ತಿರುವ ಕೋ.ಮ.ಕಾರಂತ ಪ್ರಶಸ್ತಿಗೆ “ಫಾದರ್ ಆಫ್ ಕಾಂಕ್ರಿಟ್” ಎಂದೇ ಬಿರುದಾಂಕಿತರಾದ ಪ್ರೊ.ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ದಿ.ಕೆ.ಎಂ. ಕಾರಂತರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ.

ವಕ್ವಾಡಿ, ಕೋಟೇಶ್ವರದಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕೆ ತೆರಳಿದ ಎಂ.ಸುಬ್ಬಣ್ಣ ಶೆಟ್ಟಿಯವರು ಇಂಜಿಯರ್ ಆಗಿ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್ ಸೇರಿದ ಮೇಲೆ ಸಾಧಿಸಿರುವುದು ಅಪಾರ. ಎರಡು ಲಕ್ಷಕ್ಕೂ ಹೆಚ್ಚು ಆರ್ಮಿ ಇಂಜಿನಿಯರ್‌ರನ್ನು ತರಬೇತುಗೊಳಿಸಿದ ಖ್ಯಾತಿ ಪಡೆದಿರುವ ಇವರು ಉನ್ನತ ಶಿಕ್ಷಣ ಪಡೆಯುವ ಇಂಜಿನಿಯರ್‌ಗೂ ಮಾರ್ಗದರ್ಶನ ನೀಡಿದವರು.

ಇವರು ಬರೆದ “ಕಾಂಕ್ರಿಟ್ ಟೆಕ್ನಾಲಜಿ” ಪುಸ್ತಕ 50 ಬಾರಿ ಮರುಮುದ್ರಣಗೊಂಡು ವಿಶ್ವಾದ್ಯಂತ ಮಾರ್ಗದರ್ಶಕ ಪಠ್ಯವಾಗಿ ಪರಿಗಣಿಸಲ್ಪಟ್ಟಿದೆ. ದೇಶದಲ್ಲಿ ಹತ್ತು ಹಲವು ನಿರ್ಮಾಣ ಕಾರ್ಯಗಳಿಗೆ ಮಾರ್ಗದರ್ಶಕ, ಸಲಹೆಗಾರರಾಗಿ ಸೇವೆ ಸಲ್ಲಿಸಿದ ಇವರಿಗೆ “ಲೈಫ್ ಟೈಮ್ ಎಚೀವ್‌ಮೆಂಟ್ ಅವಾರ್ಡ್” ಎಂಬ ರಾಷ್ಟ್ರೀಯ ಪ್ರಶಸ್ತಿ ಇಂಡಿಯನ್ ಕಾಂಕ್ರಿಟ್ ಇನ್‌ಸ್ಟಿಟ್ಯೂಟ್ ನೀಡಿದೆ.

ಜನವರಿ 19 ರಂದು ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಮಾರಂಭ ನಡೆಯಲಿದೆ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.

Exit mobile version