Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರಿ ಸಂಸ್ಥೆಗಳಿಂದ ಸ್ವಾವಲಂಭಿ ಬದುಕು: ಎಸ್. ರಾಜು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೃಷಿ, ಹೈನುಗಾರಿಕೆ ಹಾಗೂ ಇನ್ನಿತರೆ ಸ್ವ-ಉದ್ಯೋಗವನ್ನು ಆರಂಭಿಸಿ ಬದುಕು ಕಟ್ಟಿಕೊಳ್ಳುವ ಆಕಾಂಕ್ಷಿಗಳಿಗೆ ಸಹಕಾರಿ ಸಂಸ್ಥೆಗಳು ಆರ್ಥಿಕ ನೆರವನ್ನು ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿಸಲು ಪ್ರೇರೇಪಿಸುತ್ತದೆ ಎಂದು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಅವರು ಬುಧವಾರ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಇದರ ಗೋಳಿಹೊಳೆ ಶಾಖೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವ-ಸಹಾಯ ಸಂಘದ ಸದಸ್ಯರು ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರು ಸಾಲ ಪಡೆಯುವ ಜೊತೆಗೆ ಉಳಿತಾಯ ಮಾಡುವ ಮನೋಭಾವನೆಯನ್ನು ರೂಡಿಸಿಕೊಳ್ಳುವುದು ಅಗತ್ಯ. ಅದು ತುರ್ತು ಸಂದರ್ಭದಲ್ಲಿ ನೆರವಿಗೆ ಬರುವುದಲ್ಲದೇ ಬದುಕಿನಲ್ಲಿಯೂ ಭದ್ರತೆ ಭಾವ ಮೂಡುವಂತೆ ಮಾಡುತ್ತದೆ ಎಂದರು.

ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಎಪಿಎಂಸಿ ಸದಸ್ಯ ವಸಂತ ಹೆಗ್ಡೆ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ ಶೆಟ್ಟಿ, ಎಸ್‌ಸಿಡಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಶಾಖಾ ಪ್ರಬಂಧಕ ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭ ಸಂಸ್ಥೆಯ ವ್ಯಾಪ್ತಿಯ ಮೂರೂರು ಹಾಗೂ ಏಳಜಿತದ ಕೊರಗ ಸಮುದಾಯದ ಮಕ್ಕಳಿಗೆ ಬಟ್ಟೆ ವಿತರಿಸಲಾಯಿತು. ಅತಿ ಹೆಚ್ಚು ಸ್ವ-ಸಹಾಯ ಸಂಘಗಳನ್ನು ರಚಿಸಿದ ಶಾಂತಾ ಅವರಿಗೆ ಚಿನ್ನದ ನಾಣ್ಯ ಬಹುಮಾನವಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅದೃಷ್ಟಶಾಲಿ ಗ್ರಾಹಕ ವಿಜೇತರುಗಳಿಗೆ ಬಹುಮಾನ ನೀಡಲಾಯಿತು.

ರಾಮಕೃಷ್ಣ ಆಚಾರ್ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಿನಾಯಕ ರಾವ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಮಡಿವಾಳ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Exit mobile version